ಬಣ್ಣದಾಟದ ಹಬ್ಬ ಹೋಳಿಯನ್ನು ಕರ್ನಾಟಕ ಸೇರಿದಂತೆ ರಾಷ್ಟ್ರಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಜನತೆ ವಯಸ್ಸು, ಜಾತಿಧರ್ಮ ಬೇಧ ಮರೆತು ತಮ್ಮ ಆತ್ಮೀಯರು ಮಿತ್ರರು, ನೆಂಟರು, ಇಷ್ಟರ ಜತೆ ಹೋಳಿ ಆಡುತ್ತಿದ್ದಾರೆ.ಎಲ್ಲೆಲ್ಲೂ 'ಹೋಳಿ ಹೈ' ಎನ್ನುತ್ತಾ ಪರಸ್ಪರ ಬಣ್ಣ ರಾಚಿಕೊಳ್ಳುತ್ತಿರುವ ದೃಶ್ಯವೇ ರಾರಾಜಿಸುತ್ತಿದೆ. ಮಕ್ಕಳಂತೂ ಇನ್ನಿಲ್ಲದ ಸಂಭ್ರಮದಲ್ಲಿ ಪಿಚಕಾರಿಗಳಲ್ಲಿ ಬಣ್ಣ ಎರಚಿಕೊಳ್ಳುತ್ತಾ ಹೋಳಿಯಾಟದಲ್ಲಿ ಮೈ ಮರೆತಿದ್ದಾರೆ.ಲಕ್ನೋದಲ್ಲಿ ಸುಮಾರು 40 ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಅಪಾರ ಸಂಖ್ಯೆಯ ಹಿಂದೂ ಮತ್ತು ಮುಸ್ಲಿಮರು 'ಹೋಳಿ ಬರಾತ್' ಆಚರಿಸಿದರು. ಕೊನೇಶ್ವರ್ ದೇವಾಲಯದಿಂದ ಮುಂಜಾನೆ ಸುಮಾರು 10 ಗಂಟೆಗೆ ಹೊರಟ ಮೆರವಣಿಗೆಯಲ್ಲಿ ಜನರು ಬ್ಯಾಂಡು ವಾದ್ಯಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.ಮೆರವಣಿಗೆ ಸುಮಾರು ನಾಲ್ಕು ಕಿಲೋ ಮೀಟರ್ ದೂರ ಸಾಗಿತು. ಹೋಳಿ ಬರಾತ್ ಕೋಮುಸೌಹಾರ್ದಕ್ಕೆ ಅತ್ಯುತ್ತಮ ಉದಾಹರಣೆ ಎಂದು ಬಿಜೆಪಿಯ ಲಾಲ್ಜಿ ಟಂಡನ್ ಹೇಳಿದ್ದಾರೆ. ಲಕ್ನೋ ಚೌಕ್ ಪ್ರದೇಶದ ನಿವಾಸಿಯಾಗಿರುವ ಟಂಡನ್ ಅವರು ಕಳೆದ 40 ವರ್ಷಗಳಿಂದ ಈ ಸಮಾರಂಭದಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.ಮೆರವಣಿಗೆಯ ಹಿಂದಿನ ರಾತ್ರಿ ಇಲ್ಲಿನ ಮುಸ್ಲಿಮರು ಹೂವಿನ ಹಾರ ಮತ್ತು ಗುಲಾಬಿ ದಳಗಳನ್ನು ಒಟ್ಟುಮಾಡಿ ಹೋಳಿ ಆಡಲು ಬರುವ ಹಿಂದೂಗಳ ಮೇಲೆ ಸುರಿಯುತ್ತಾರೆ. ಪ್ರತಿಯಾಗಿ ಹಿಂದೂಗಳು ಸಹ ಮುಸ್ಲಿಮರಿಗೆ ಹೂವಿನ ಹಾರಹಾಕಿ ಉಲ್ಲಾಸ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಮೂಲಕ ನಾವು ವರ್ಷಗಳಿಂದ ಹೋಳಿ ಆಚರಿಸುತ್ತೇವೆ ಎಂಬುದು ಕಾರ್ಯಕ್ರಮ ಸಂಘಟಕರಲ್ಲೊಬ್ಬರಾದ ಅನುರಾಗ್ ಮಿಶ್ರಾ ಅವರ ಅಭಿಪ್ರಾಯ.ಹಳೆಯ ಲಕ್ನೋದ ವಿವಿಧ ಪ್ರದೇಶಗಳಲ್ಲಿ ಮೆರವಣಿಗೆ ಹಾದು ಹೋಗುತ್ತಿರುವಂತೆ ಮೆರವಣಿಗೆಯಲ್ಲಿ ಹೆಚ್ಚೆಚ್ಚು ಮಂದಿ ಪಾಲ್ಗೊಂಡರು. ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಸಿಹಿತಿಂಡಿಗಳನ್ನು ಹಂಚಲಾಯಿತು. ಈ ಬಹುಮತೀಯ ಮೆರವಣಿಗೆಯು ಕಳೆದ 40 ವರ್ಷಗಳಲ್ಲಿ ಒಮ್ಮೆಯೂ ನಿಂತ ಉದಾಹರಣೆ ಇಲ್ಲ. 1992ರಲ್ಲಿ ಬಾಬರಿ ಮಸೀದಿ ಧ್ವಂಸವಾಗಿ ಕೋಮು ಉದ್ವಿಗ್ನತೆ ಸಂಭವಿಸಿದ್ದರೂ, ಲಕ್ನೋ ಚೌಕದಲ್ಲಿ ಯಾವುದೇ ತೊಂದರೆ ಇಲ್ಲದಂತೆ ಎಂದಿನ ಉತ್ಸಾಹದಲ್ಲಿ ಹೋಳಿ ಆಚರಣೆ ನಡೆದಿತ್ತು. |