ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮಾಡಿರುವ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳು ಹಾಗೂ ಅವರ ವಿಕಾಸ್ ಪುರುಷ ಇಮೇಜ್ ಗೋವಾದಲ್ಲಿ ಮತಗಳಿಸಲು ಬಿಜೆಪಿಗೆ ಸಹಾಯ ಒದಗಿಸಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಮೋದಿ ಅವರು ಅಭಿವೃದ್ಧಿ ಬಯಸುತ್ತಾರೆ ಮತ್ತು ಕ್ಷುಲ್ಲಕ ರಾಜಕೀಯ ನಡೆಸುವುದಿಲ್ಲ ಎಂಬುದು ಅವರ ಪ್ರಸಕ್ತ ಇಮೇಜ್ ಆಗಿದೆ ಎಂಬುದಾಗಿ ವಿರೋಧ ಪಕ್ಷಗಳ ನಾಯಕ, ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕಾರ್ ಹೇಳಿದ್ದಾರೆ.
ಮೋದಿ ಅವರಿಗೆ ಗೋವಾ ಲೋಕಸಭಾ ಚುನಾವಣಾ ಪ್ರಚಾರದ ಮೇಲ್ವಿಚಾರಣೆಯನ್ನು ವಹಿಸಲಾಗಿದೆ. ಇಲ್ಲಿ ಬಿಜೆಪಿಯು ಎರಡೂ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಪರಿಕಾರ್ ತಿಳಿಸಿದ್ದಾರೆ.
ಪಕ್ಷದ ಕೇಡರನ್ನು ಶಕ್ತಿಶಾಲಿಯಾಗಿಸಲು ನರೇಂದ್ರ ಮೋದಿ ಅವರು ಸಹಾಯ ಮಾಡಲಿದ್ದಾರೆ ಎಂದು ನುಡಿದ ವಿಪಕ್ಷ ನಾಯಕ, ಅವರು ಪಕ್ಷದ ಅಭ್ಯರ್ಥಿಗಳು ಮತಗಳಿಸಲು ಬಿಡುವಿಲ್ಲದ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ನುಡಿದರು.
ಅಲ್ಪಸಂಖ್ಯಾತರು ಮೋದಿ ಅವರನ್ನು ಸ್ವೀಕರಿಸುವರೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯು ಎಲ್ಲಾ ಧರ್ಮದವರನ್ನು ಸಮಾನವಾಗಿ ನೋಡುತ್ತದೆ ಮತ್ತು ಪ್ರತಿಯೊಬ್ಬರಿಗೂ ಸುರಕ್ಷಿತ ವಾತಾವರಣ ಕಲ್ಪಿಸುವುದು ಅದರ ಗುರಿಯಾಗಿದೆ ಎಂದು ನುಡಿದರು.
"ರಾಜ್ಯದಲ್ಲಿ ಅತ್ಯಾಚಾರ ಹಾಗೂ ಚುಡಾಯಿಸುವಿಕೆ ಪ್ರಕರಣಗಳು ಹೆಚ್ಚುತ್ತಿದ್ದು ಮುಖ್ಯಮಂತ್ರಿ ಹಾಗೂ ಗೃಹಸಚಿವರು ಕ್ರಿಮಿನಲ್‌ಗಳೊಂದಿಗೆ ಸಂಪರ್ಕ ಹೊಂದಿದ್ದಾರೆ" ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಪರಿಕರ್, ಜನಸಾಮಾನ್ಯರಿಗೆ ಭದ್ರತೆ ಮತ್ತು ಸುರಕ್ಷತೆ ನೀಡುವ ಪಕ್ಷವೊಂದು ರಾಜ್ಯಕ್ಕೆ ಬೇಕಾಗಿದೆ ಎಂದು ನುಡಿದರು. |