ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ಮೈತ್ರಿಕೂಟಗಳಿಗೆ ಪರ್ಯಾಯವಾಗಿ ನಿರ್ಮಿಸ ಹೊರಟಿರುವ ತೃತೀಯ ರಂಗವು ಗುರುವಾರ ಅನಾವರಣಗೊಳ್ಳಲಿದ್ದು, ಸ್ಪಷ್ಟ ರೂಪು ಪಡೆಯಲಿದೆ.
ತೃತೀಯ ರಂಗದ ಸೂತ್ರಧಾರಿ ಜೆಡಿಎಸ್ ಅಲ್ಲದೆ, ಸಿಪಿಐ, ಸಿಪಿಐ-ಎಂ, ತೆಲಂಗಾಣ ರಾಷ್ಟ್ರ ಸಮಿತಿ, ತೆಲುಗು ದೇಶಂ, ಎಐಎಡಿಎಂಕೆ, ಫಾರ್ವರ್ಡ್ ಬ್ಲಾಕ್ ಮತ್ತು ಆರ್ಎಸ್‌ಪಿ ಪಕ್ಷಗಳನ್ನು ಒಳಗೊಳ್ಳಲಿದ್ದು ಗುರುವಾರ ಸ್ಪಷ್ಟ ಚಿತ್ರಣ ಪಡೆಯಲಿದೆ. ಕೇಂದ್ರದಲ್ಲಿ 1988ರಲ್ಲಿ ಕಾಂಗ್ರೆಸೇತರ ಶಕ್ತಿಯಾಗಿ ರೂಪುಗೊಂಡ ಮೇಲೆ ಇದು ಹಲವು ಏಳುಬೀಳು ಹಾಗೂ ಹೋಳುಗಳನ್ನು ಕಂಡಿದೆ.
ಬಿಜೆಪಿಯೊಂದಿಗೆ ಮುನಿಸಿಕೊಂಡಿರುವ ಒರಿಸ್ಸಾದ ನವೀನ್ ಪಟ್ನಾಯಕ್ ಅವರ ಬಿಜೆಡಿಯು ಬೇಷರತ್ತಾಗಿ ತೃತೀಯ ರಂಗಕ್ಕೆ ಸೇರ್ಪಡೆಗೊಳ್ಳಲು ಒಪ್ಪಿದೆ ಎಂಬುದಾಗಿ ದೇವೇ ಗೌಡ ಮಂಗಳವಾರ ಘೋಷಿಸಿದ್ದರು. ಆದರೆ ಇದನ್ನು ಅಲ್ಲಗಳೆದಿರುವ ಬಿಜೆಡಿ ತಾನು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದೆ.
ತೃತೀಯ ರಂಗದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಭಾರೀ ರ‌್ಯಾಲಿಯನ್ನು ಆಯೋಜಿಸಿರುವ ಜೆಡಿಎಸ್ ಭಾರೀ ನಿರೀಕ್ಷೆ ಇರಿಸಿಕೊಂಡಿದೆ. ತುಮಕೂರಿನ ದಾಬಾಸ್ ಪೇಟೆಯಲ್ಲಿ ದೇವೇಗೌಡರ ಮಹತ್ವಾಕಾಂಕ್ಷೆಯ ಬೃಹತ್ ಸಮಾವೇಶ ನಡೆಯಲಿದೆ.
ಈ ಮಧ್ಯೆ, ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಸಮಾವೇಶದಲ್ಲಿ ಎಐಎಡಿಎಂಕೆಯನ್ನು ಪಕ್ಷದ ನಾಯಕ ವಿ. ಮೈತ್ರೇಯನ್ ಪ್ರತಿನಿಧಿಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಜಯಾ ಗೈರುಹಾಜರಿಗೆ ಯಾವುದೇ ಕಾರಣ ನೀಡಿಲ್ಲ.
ಸಮಾವೇಶದಲ್ಲಿ ಯಾವುದೇ ಕುಂದು ಕೊರತೆ ಉಂಟಾಗದಂತೆ ದೇವೇಗೌಡರೆ ಖುದ್ದಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. |