ಭಾರತ ತನ್ನದೇ ಆದ ಗೂಗಲ್ ಅರ್ಥ್ ತಯಾರಿಸಲು ಹೊರಟಿರುವುದು ಇದೀಗ ಉಗ್ರರಿಗೆ ತಮ್ಮ ಚಟುವಟಿಕೆಗಳಿಗೆ ಸುಲಭದ ಮಾಧ್ಯಮವಾಗಬಹುದೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನಗರ ಯೋಜನೆಗಳನ್ನು ಗುರಿಯಾಗಿಟ್ಟುಕೊಂಡು ಈ ಗೂಗಲ್ ಅರ್ಥ್‌ನ್ನು ಭಾರತ ಪ್ರತ್ಯೇಕವಾಗಿ ತಯಾರಿಸುತ್ತಿದ್ದು, ಇದಕ್ಕೆ ಭುವನ್ ಎಂದು ಹೆಸರಿಡಲಾಗಿದೆ. ಇದೀಗ ಮುಂಬೈ ಉಗ್ರರ ದಾಳಿಯ ನಂತರ ವಿಜ್ಞಾನಿಗಳಿಗೆ ಇಂತಹ ಪ್ರಶ್ನೆ ಹುಟ್ಟುಹಾಕಿದೆ.ಅಂತರ್ಜಾಲ ಆಧಾರಿತ ಸೇವೆ ಇದಾಗಿದ್ದು, ಭಾರತದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಈ ಹೊಸ ಭುವನ್‌ನ್ನು ಅಭಿವೃದ್ಧಿಪಡಿಸುತ್ತಿದೆ.
ಇದು ವಿಜ್ಞಾನಿಗಳ ಉಪಯೋಗಕ್ಕೆ, ನಗರ ಯೋಜನೆಗಳಿಗೆ ಅಲ್ಲದೆ ಪ್ರಕೃತಿ ವಿಕೋಪಗಳ ವ್ಯವಸ್ಥಾಪನೆಗೂ ಸಹಕಾರಿಯಾಗಲಿದೆ ಎಂದು ಅಧಿಕಾರಗಳು ಹೇಳುತ್ತಾರೆ. ಇದು ಈಗಿರುವ ಗೂಗಲ್ ಅರ್ಥ್‌ಗಿಂತಲೂ ವಿನೂತನ ಮಾದರಿಯದಾಗಿದ್ದು, ವೀಕ್ಷಕರು ಮಣ್ಣಿನ ಮಾದರಿ, ಅಂತರ್ಜಲ ಮಟ್ಟ, ನೆಲಯ ಮೇಲ್ಮೈಯನ್ನು ಉತ್ತಮ ಗುಣಮಟ್ಟದ ಸ್ಯಾಟಲೈಟ್ ಚಿತ್ರಗಳ ಮೂಲಕ ನೋಡಬಹುದು. 2.5 ಮೀಟರ್ ರೆಸೊಲ್ಯೂಶನ್ ಸಾಮರ್ಥ್ಯದ ಚಿತ್ರಗಳಿಗಾಗಿ ಈಗ ತಯಾರಿ ನಡೆಯುತ್ತಿದೆ ಎನ್ನುತ್ತಾರೆ ಎನ್ಆರ್ಎಸ್‌ಸಿ ನಿರ್ದೇಶಕ ವಿ.ಜಯರಾಮನ್.
ಭೂಮಿ ಬಳಕೆ, ಅಂತರ್ಜಲ ಸಾಮರ್ಥ್ಯ, ಮಣ್ಣಿನ ಬಗೆ ಮತ್ತಿತರ ವಿಷಯಗಳೂ ಭುವನ್‌ನಲ್ಲಿ ಸಿಗಲಿವೆಯಂತೆ. ಆದರೆ ಇಷ್ಟು ಸಾಮರ್ಥ್ಯ ಈಗಿರುವ ಗೂಗಲ್ ಅರ್ಥ್‌ನಲ್ಲಿಲ್ಲ. ಆದರೆ ಇದೀಗ ಸ್ಯಾಟಲೈಟ್ ಚಿತ್ರಗಳನ್ನು ಸಾಮಾನ್ಯ ಜನರೂ ಸುಲಭವಾಗಿ ನೋಡುವಂತಾದರೆ, ಭುವನ್ ಅಂತರ್ಜಾಲ ಸೇವೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು ಎಂದು ಇದೀಗ ವಿಜ್ಞಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ. ಮುಂಬೈ ದಾಳಿಯಲ್ಲಿ ಸೆರೆ ಸಿಕ್ಕ ಉಗ್ರ ಮಹಮ್ಮದ್ ಅಜ್ಮಲ್ ಕಸಬ್‌ನ ಇತ್ತೀಚಿನ ಹೇಳಿಕೆಯ ಪ್ರಕಾರ, ಉಗ್ರರಿಗೆ ತರಬೇತಿ ನೀಡುವ ಸಂದರ್ಭ ಗೂಗಲ್ ಅರ್ಥ್ ಚಿತ್ರಗಳನ್ನು ತೋರಿಸಲಾಗುತ್ತಿತ್ತು. ಹೀಗಾಗಿ ಭುವನ್ ಅಭಿವೃದ್ಧಿಪಡಸಿದರೆ ಇಂತಹ ಉಗ್ರರ ಲೆಕ್ಕಾಚಾರಗಳಿಗೆ ಸುಲಭ ಮಾರ್ಗವಾಗಬಹುದು ಎಂಬ ಗುಮಾನಿಯೂ ಹುಟ್ಟಿಕೊಂಡಿದೆ. |