ಹೋಳಿ ಹಬ್ಬದ ವೇಳೆ ಉಡುಗೊರೆ ನೀಡಿರುವ ಸಮಾಜವಾದಿ ಪಕ್ಷವು ತೊಂದರೆಯಲ್ಲಿ ಸಿಲುಕುವ ಲಕ್ಷಣಗಳು ಗೋಚರವಾಗಿವೆ. ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಚುನಾವಣಾ ಕ್ಷೇತ್ರ ಎಟ್ಟಾವದಲ್ಲಿ ಸಂಘಟಿಸಲಾಗಿದ್ದ ಹೋಳಿ ಆಚರಣೆಯಲ್ಲಿ ಸಮಾಜವಾದಿ ಕಾರ್ಯಕರ್ತರು ಉಡುಗೊರೆ ರೂಪದಲ್ಲಿ ಹಣವಿತರಣೆ ಮಾಡಿದ್ದಾರೆನ್ನಲಾಗಿದೆ.
ಹಬ್ಬಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ತಲಾ 100 ರೂಪಾಯಿ ಹಂಚಲಾಗಿದೆ ಎಂದು ಹೇಳಲಾಗಿದೆ. ಹಣವಿತರಣೆ ವೇಳೆ ನೂಕುನುಗ್ಗಲು ಉಂಟಾಗಿದ್ದು, ಈ ವೇಳೆ ಖುದ್ದು ಮುಲಾಯಂ ಅವರೇ ಎಲ್ಲರಿಗೂ ಹಣದೊರೆಯುತ್ತದೆ ಎಂಬ ಭರವಸೆ ನೀಡುತ್ತಿದ್ದರು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
"ದಯವಿಟ್ಟು ಎಲ್ಲರೂ ಕುಳಿತುಕೊಳ್ಳಿ. ನಿಮ್ಮ ಪಾಲಿನದ್ದು ನಿಮಗೆ ದೊರೆಯುತ್ತದೆ" ಎಂದು ಮುಲಾಯಂ ಸಭಿಕರಿಗೆ ನುಡಿದರೆನ್ನಲಾಗಿದೆ.
ಹಣ ಹಂಚಿರುವ ಮುಲಾಂ ಇದೀಗ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಆರೋಪ ಎದುರಿಸುವ ಸಾಧ್ಯತೆಗಳು ದಟ್ಟವಾಗಿವೆ. |