ಬುಧವಾರ ನಡೆದ ವಿಶ್ವಾಸ ಮತಯಾಚನೆ ವೇಳೆ ಧ್ವನಿಮತದ ಮೂಲಕ ಬಹುಮತ ಸಾಬೀತು ಪಡಿಸಿದ ಒರಿಸ್ಸಾ ಸರ್ಕಾರ ಇನ್ನೊಂದು ಬಾರಿ ವಿಶ್ವಾಸಮತ ಯಾಚಿಸಲಿದೆಯೇ? ಈ ಕುರಿತು ಹೌದು ಅಥವಾ ಇಲ್ಲ ಎಂಬ ಉತ್ತರವು ಶುಕ್ರವಾರ ನಿರ್ಣಯವಾಗಲಿದೆ.ವಿಶ್ವಾಸ ಮತ ಪ್ರಕ್ರಿಯೆಯನ್ನು ಪ್ರಶ್ನಿಸಿ ವಿರೋಧ ಪಕ್ಷಗಳು ರಾಜ್ಯಪಾಲರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ, ರಾಜ್ಯಪಾಲರು ಶುಕ್ರವಾರ ತಮ್ಮ ನಿರ್ಧಾರ ಹೊರಗೆಡಹಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.ಈ ವಿಚಾರದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವ ಹಿನ್ನೆಲೆಯಲ್ಲಿ ತಮ್ಮ ಆಯ್ಕೆಗಳನ್ನು ಪರಿಗಣಿಸಲು ರಾಜ್ಯಪಾಲ ಎಂ.ಸಿ. ಭಂಡಾರೆ ಅವರು ರಾಜ್ಯ ಅಡ್ವೋಕೇಟ್ ಜನರಲ್‌ರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.ನವೀನ್ ಪಟ್ನಾಯಕ್ ಸರ್ಕಾರವು ಇನ್ನೊಮ್ಮೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸುವುದು ಆಯ್ಕೆಗಳಲ್ಲಿ ಒಂದು ಎಂದು ಹೇಳಲಾಗಿದೆ. ಅಥವಾ ಅವರು ರಾಷ್ಟ್ರಪತಿಗಳ ಆಳ್ವಿಕೆಗೆ ಶಿಫಾರಸ್ಸು ಮಾಡುವ ಸಾಧ್ಯತೆಯೂ ಇದೆ. ಇದಲ್ಲದೆ, ಬುಧವಾರ ನಡೆದ ವಿಶ್ವಾಸ ಮತಯಾಚನೆ ವೇಳೆ 147 ಶಾಸಕರಲ್ಲಿ 81 ಮಂದಿ ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಕುರಿತು ಸ್ಪೀಕರ್ ನೀಡಿರುವ ವರದಿಯನ್ನೂ ಅವರು ಸ್ವೀಕರಿಸುವ ಸಾಧ್ಯತೆಗಳಿವೆ.ಸ್ಥಾನ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯದಿಂದಾಗಿ ತನ್ನೊಂದಿಗೆ ಬಿಜೆಡಿ ಮೈತ್ರಿ ಮುರಿದುಕೊಂಡಿರುವುದಕ್ಕೆ ಪ್ರತಿಯಾಗಿ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಅಲ್ಪಸಂಖ್ಯಾತವಾಗಿತ್ತು.ಬುಧವಾರ ನಡೆದ ವಿಶ್ವಾಸಮತ ಯಾಚನೆ ಪ್ರಕ್ರಿಯೆ ವೇಳೆಗೆ ತೀವ್ರ ಕೋಲಾಹಲ, ಗೊಂದಲ ಉಂಟಾಗಿದ್ದು, ಸದನದ ನಡಾವಳಿಯನ್ನು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ದೂರಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ರಾಜ್ಯಪಾಲರನ್ನು ವಿನಂತಿಸಿವೆ. |