ಪಕ್ಷದ ಇತರ ಸದಸ್ಯರೊಂದಿಗೆ ಅಸಮಾಧಾನಗೊಂಡು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸಭೆಯಿಂದ ದೂರಉಳಿದಿದ್ದ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರು ಶುಕ್ರವಾರ ಸಾಯಂಕಾಲ ನಡೆಯಲಿರುವ ಜೆಡಿಯು-ಬಿಜೆಪಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಇದಲ್ಲದೆ ಅವರು ಎಲ್ಲಾ ಸಾಂಸ್ಥಿಕ ಹಾಗೂ ಚುನಾವಣಾ ಜವಾಬ್ದಾರಿಗಳಲ್ಲಿ ಪಾಲ್ಗೊಳ್ಳಲಿದ್ದಾರೆಂದೂ ಅವುಗಳು ಹೇಳಿವೆ.
ಶುಕ್ರವಾರ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಗೆ ಗೈರುಹಾಜರಾಗಿದ್ದ ಜೇಟ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದು, ಅತ್ಯಂತ ಶಿಸ್ತಿನ ಪಕ್ಷವೆಂಬ ಅಗ್ಗಳಿಕೆಗೆ ಭಾಜನವಾಗಿದ್ದ ಬಿಜೆಪಿಯೊಳಗೆ ಒಡಕು ಎಂಬ ಸಂದೇಶ ರವಾನೆಯಾಗುವಂತೆ ಮಾಡಿದ್ದರು.
ಈಶಾನ್ಯ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ನೇತೃತ್ವ ವಹಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷಾಧ್ಯಕ್ಷ ರಾಜನಾಥ್ ಸಿಂಗ್ ಅವರೊಂದಿಗೆ ಉಂಟಾಗಿರುವ ಮನಸ್ತಾಪವೇ ಜೇಟ್ಲಿ ಗೈರು ಹಾಜರಾಗಲು ಕಾರಣವಾಗಿದೆ. ಈಶಾನ್ಯ ಭಾಗದ ಪಕ್ಷ ಪ್ರಚಾರ ಸಮಿತಿಗೆ ಸುದಾಂಶು ಮಿತ್ತಲ್ ಅವರನ್ನು ನೇಮಕ ಮಾಡಿರುವುದು ಜೇಟ್ಲಿ ಮುನಿಸಿಗೆ ಕಾರಣ ಎಂದು ಬಲ್ಲ ಮೂಲಗಳು ಹೇಳಿವೆ.
ಶುಕ್ರವಾರದ ಚುನಾವಣಾ ಸಭೆಯಲ್ಲಿ ದೆಹಲಿ, ಆಂಧ್ರಪ್ರದೇಶ ಹಾಗೂ ಬಿಹಾರಗಳಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದೆ. ಈ ಮಧ್ಯೆ, ಬಿಜೆಪಿಯು ತನ್ನ ಮಿತ್ರ ಪಕ್ಷ ಜೆಡಿಯುನೊಂದಿಗಿನ ಸೀಟು ಹಂಚಿಕೆ ವಿಚಾರವನ್ನು ಬಹುತೇಕ ಅಂತಿಮಗೊಳಿಸಿದೆ ಎಂದು ಹೇಳಲಾಗಿದೆ. ಸಾಯಂಕಾಲ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ 40 ಸ್ಥಾನಗಳ ಹಂಚಿಕೆ ಮಾತುಕತೆ ಜೌಪಚಾರಿಕವಾಗಿ ನಡೆಯಲಿದೆ.
ಒಪ್ಪಂದದ ಪ್ರಕಾರ ಬಿಜೆಪಿಯು 16 ಸ್ಥಾನಗಳನ್ನು ಮತ್ತು ಜೆಡಿಯು 24 ಸ್ಥಾನಗಳನ್ನು ಪಡೆಯಲಿದೆ. ಈಶಾನ್ಯ ಬಿಹಾರದ ಮುಸ್ಲಿಂ ಬಾಹುಳ್ಯದ ಕಿಶನ್‌ಗಂಜ್ ಕ್ಷೇತ್ರವನ್ನು ಜೆಡಿಯುಗೆ ಬಿಟ್ಟುಕೊಡಲು ಬಿಜೆಪಿ ಸಿದ್ಧವಿದೆ.
|