ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತೆಯು ಹಿಂದುಪರ ಅಭ್ಯರ್ಥಿಗಳಿಗೆ ಮತನೀಡುವ ಮೂಲಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವಂತೆ ಮಾಡಬೇಕು ಎಂಬುದಾಗಿ ವಿಶ್ವಹಿಂದೂ ಪರಿಷತ್(ವಿಎಚ್‌ಪಿ) ಒತ್ತಾಯಿಸಿದೆ.
ಇಲ್ಲಿ ಗುರುವಾರ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ವಿಎಚ್‌ಪಿ ಕಾರ್ಯಾಧ್ಯಕ್ಷ ಅಶೋಕ್ ಸಿಂಘಾಲ್ ಅವರು ರಾಷ್ಟ್ರದ ಭವಿಷ್ಯಕ್ಕಾಗಿ ಬಹುಮತೀಯ ಸಮುದಾಯವು ನಿರ್ಣಯ ಕೈಗೊಳ್ಳಲು ಕಾಲಪಕ್ವವಾಗಿದೆ ಎಂದು ನುಡಿದರು.
ರಾಷ್ಟ್ರದ ಬಹುಸಂಖ್ಯಾತ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಕನಸಾಗಿರುವ ರಾಮಮಂದಿರ ನಿರ್ಮಾಣದ ಉದ್ದೇಶವು ಚುನಾವಣೆಯಲ್ಲಿ ಹಿಂದೂಪರ ಅಭ್ಯರ್ಥಿಗಳನ್ನು ಬೆಂಬಲಿಸುವುದರಿಂದ ಮಾತ್ರ ಸಾಧ್ಯ ಎಂದು ಅವರು ಕರೆ ನೀಡಿದ್ದಾರೆ.
ಜಾತ್ಯತೀತವೆಂದು ಹೇಳಿಕೊಳ್ಳುತ್ತಿರುವ ಪಕ್ಷಗಳನ್ನು ಟೀಕಿಸಿದ ಅವರು, ಇಂತಹ ಪಕ್ಷಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಪರಿಸ್ಥಿತಿಯ ಅನಕೂಲ ಪಡೆಯಲು ಸಹಾಯ ಮಾಡುವ ಮೂಲಕ ರಾಷ್ಟ್ರಕ್ಕೆ ಹಾನಿಯುಂಟು ಮಾಡುತ್ತಿವೆ ಎಂದು ನುಡಿದರು. ಕೆಲವು ರಾಜಕೀಯ ಪಕ್ಷಗಳು ರಾಷ್ಟ್ರವನ್ನು ದುರ್ಬಲಗೊಳಿಸಲು ಜಾತಿ ಮತಗಳ ಮೂಲಕ ಬಹುಸಂಖ್ಯಾತ ಸಮುದಾಯವನ್ನು ಒಡೆಯುತ್ತಿವೆ ಎಂಬ ಆರೋಪವನ್ನೂ ಅವರು ಮಾಡಿದರು.
ವಿಎಚ್‌ಪಿಯು ರಾಜಕಿಯೇತರ ಪಕ್ಷ ಎಂದು ನುಡಿದ ಅವರು, ಜಾತ್ಯತೀತ ಪಕ್ಷಗಳ ನೈಜ ಮುಖದ ಕುರಿತು ಹಿಂದೂಗಳಲ್ಲಿ ಅರಿವು ಮೂಡಿಸಲು ಇದು ಪ್ರಯತ್ನಿಸುತ್ತದೆ ಎಂದು ನುಡಿದರು. |