ಕಾಂಗ್ರೆಸ್ ಅಧಿನಾಯಕಿ, ಸರಕಾರವನ್ನು 'ಮುನ್ನಡೆಸಿದ' ಧೀರೆ ಎಂದೆಲ್ಲಾ ಪಕ್ಷೀಯರಿಂದ ಕರೆಸಿಕೊಳ್ಳುತ್ತಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಷಣ ಓದುವುದನ್ನು ಈಗಲೂ ಮುಂದುವರಿಸುತ್ತಿರುವಂತೆಯೇ, ಲೋಕಸಭೆಯಲ್ಲಿ ಕೂಡ ಆಕೆ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿಲ್ಲ! ಅಂದರೆ ಸಂದುಹೋದ ಲೋಕಸಭೆಯಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಸೋನಿಯಾ ಗಾಂಧಿ ಸಂಸತ್ತಿನಲ್ಲಿ ಕೇಳಲಿಲ್ಲ!
ಕೆಲವು ಮುಖಂಡರು ಘೋಷಣೆ ಕೂಗುತ್ತಾರೆ, ಬಡಿದಾಡುತ್ತಾರೆ, ತೀವ್ರ ಗಲಾಟೆ ಎಬ್ಬಿಸುತ್ತಾರೆ, ಜನರ ಗಮನ (ಅಂದರೆ ಓಟು ಎಂದಿಟ್ಟುಕೊಳ್ಳಿ) ಸೆಳೆಯಲು ಯಾವುದಕ್ಕೂ ಸಿದ್ಧರಾಗುತ್ತಾರೆ, ಆದರೆ ತಮ್ಮ ಕ್ಷೇತ್ರದ ಸಮಸ್ಯೆಗಳ ವಿಷಯ ಬಂದಾಗ, ಅವರ ದನಿ ಅಡಗಿರುತ್ತದೆ. ಹೈ-ಪ್ರೊಫೈಲ್ ರಾಜಕಾರಣಿಗಳಲ್ಲಿ ಬಹುತೇಕರ ಪರಿಸ್ಥಿತಿ ಇದೇ ರೀತಿ ಎನ್ನುತ್ತವೆ ದಾಖಲೆಗಳು. ಇವರು ಪ್ರಶ್ನೆಯನ್ನೂ ಕೇಳಲಿಲ್ಲ, ಸರಕಾರದ ನೀತಿಗಳ ಕುರಿತು ಸದನದಲ್ಲಿ ನಡೆದ ಚರ್ಚೆಯಲ್ಲಿಯೂ ಭಾಗವಹಿಸಿದ್ದು ತೀರಾ ಕಡಿಮೆ.
ಇಂಥವರ ಸಾಲಿನಲ್ಲಿ, ಅತ್ಯಂತ ಕೆಟ್ಟ ನಿರ್ವಹಣೆ ತೋರಿದವರು ಎಂಬ ಖ್ಯಾತಿಗೆ ಪಾತ್ರರಾದವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ. ಈಕೆ ಒಂದೇ ಒಂದು ಪ್ರಶ್ನೆ ಕೇಳಿರಲಿಲ್ಲ ಮತ್ತು ಕೇವಲ ಮೂರು ಚರ್ಚೆಗಳಲ್ಲಿ ಮಾತ್ರವೇ ಪಾಲ್ಗೊಂಡಿದ್ದರು.
ಇದೇ ರೀತಿ, ಒಂದು ಕಾಲದಲ್ಲಿ ಸಂಸತ್ತಿನಲ್ಲಿ ಇವರ ಭಾಷಣಕ್ಕಾಗಿಯೇ ತುದಿಗಾಲಲ್ಲಿ ನಿಂತವರಿರುತ್ತಿದ್ದರು ಎಂಬ ಖ್ಯಾತಿ ಪಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಥೆಯೂ ಇದೇ. ಇವರು ಕೂಡ ತಮ್ಮ ಕ್ಷೇತ್ರದ ಬಗ್ಗೆ ಒಂದೇ ಒಂದು ಪ್ರಶ್ನೆ ಎತ್ತಲಿಲ್ಲ. ಮತ್ತು ಭಾಗವಹಿಸಿದ್ದು ಏಳು ಚರ್ಚೆಗಳಲ್ಲಿ ಮಾತ್ರ. ಕಳೆದ ಐದು ವರ್ಷಗಳಲ್ಲಿ ತೀವ್ರ ಅನಾರೋಗ್ಯದಿಂದಾಗಿ ಈ ಮಾಜಿ ಪ್ರಧಾನಿ ಸದನಕ್ಕೆ ಹಾಜರಾಗಿದ್ದು 19 ದಿನ ಮಾತ್ರ.
ಹಾಗಂತ ಬಿಜೆಪಿಯ ಪ್ರಧಾನಿ ಅಭ್ಯರ್ಥಿ, ಗಟ್ಟಿ ಕಂಠದ ಪ್ರತಿಪಕ್ಷ ನಾಯಕ ಲಾಲ್ ಕೃಷ್ಣ ಆಡ್ವಾಣಿ? ಅವರ ನಿರ್ವಹಣೆಯೂ ಹೇಳಿಕೊಳ್ಳುವಂತದ್ದಾಗಿರಲಿಲ್ಲ. ಅವರು ಕೂಡ ತಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟ ಒಂದೇ ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಆದರೆ 55 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.
ತೃಣಮೂಲ ಕಾಂಗ್ರೆಸಿನ ಮಮತಾ ಬ್ಯಾನರ್ಜಿ ಕೂಡ ತಮ್ಮ ಕ್ಷೇತ್ರದಲ್ಲಿ ಸಿಪಿಎಂ ವಿರುದ್ಧ ಹೋರಾಡುವಲ್ಲೇ ನಿರತರಾಗಿದ್ದರು. ಹೀಗಾಗಿ ಸಂಸತ್ತಿಗೆ ಹಾಜರಾಗುವುದಕ್ಕೆ ಆಕೆಗೆ ಪುರುಸೊತ್ತೇ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಐದು ವರ್ಷಗಳಲ್ಲಿ ಆಕೆ ಸಂಸತ್ತಿಗೆ ಹಾಜರಾಗಿದ್ದು 59 ದಿನಗಳು ಮಾತ್ರ.
ನಮ್ಮ ಮಾಜಿ ಪ್ರಧಾನಿ, ತೃತೀಯ ರಂಗದ ರೂವಾರಿ ಎಚ್.ಡಿ.ದೇವೇಗೌಡರು ಕೂಡ ರಾಜ್ಯ ರಾಜಕೀಯದಲ್ಲಿ, ಕೌಟುಂಬಿಕ ವಿವಾದಗಳಲ್ಲಿ ಬ್ಯುಸಿ ಆಗಿಬಿಟ್ಟಿದ್ದರು. ಅವರು ಐದು ವರ್ಷಗಳಲ್ಲಿ ಸಂಸತ್ತಿಗೆ ಹಾಜರಿ ಹಾಕಿದ್ದು 125 ದಿನಗಳು ಮಾತ್ರ. ಅವರಿಗೆ ತಮ್ಮ ಕ್ಷೇತ್ರದ ಬಗ್ಗೆ ಪ್ರಶ್ನೆ ಕೇಳುವುದಕ್ಕೆ ಪುರುಸೊತ್ತು ಲಭಿಸಲಿಲ್ಲ ಮತ್ತು ಕೇವಲ ಆರು ಚರ್ಚೆಗಳಲ್ಲಿ ಅವರು ಭಾಗವಹಿಸಿದ್ದರು. |