ಚುನಾವಣಾ ನಂತರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಥವಾ ಬಿಜೆಪಿ ಮೈತ್ರಿಕೂಟ- ಇವೆರಡಕ್ಕೂ ಬೆಂಬಲ ನೀಡುವುದಿಲ್ಲ ಎಂಬುದಾಗಿ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ. ಆದರೆ ತೃತೀಯ ರಂಗದೊಂದಿಗಿನ ಮೈತ್ರಿ ಆಯ್ಕೆಯನ್ನು ಮುಕ್ತವಾಗಿರಿಸಿದ್ದಾರೆ.
"ಬಿಜೆಡಿಯು ಕಾಂಗ್ರೆಸ್ ನೇತೃತ್ವದ ಇಲ್ಲವೇ ಬಿಜೆಪಿ ನೇತೃತ್ವದ ಸರ್ಕಾರವನ್ನು ಬೆಂಬಲಿಸುವುದಿಲ್ಲ" ಎಂದು ಪಟ್ನಾಯಕ್ ಅವರು ಚುನಾವಣಾ ನಂತರದ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಲ್ಲದೆ ಬಿಜೆಡಿಯು ತೃತೀಯ ರಂಗಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯ ಕುರಿತು ಹೇಳಲು ಕಾಲ ಪಕ್ವವಾಗಿಲ್ಲ, ಚುನಾವಣೆಯ ಬಳಿಕವೇ ಸ್ಪಷ್ಟ ಚಿತ್ರಣಗಳು ಲಭ್ಯವಾಗಲಿವೆ ಎಂದು ಹೇಳಿದ್ದಾರೆ.
ಬಿಜೆಪಿಯೊಂದಿಗಿನ ಸಖ್ಯ ಮುರಿದುಕೊಂಡ ಬಳಿಕವೂ ಪಟ್ನಾಯಕ್ ಅವರು ತಮ್ಮ ಪಕ್ಷವು ಯುಪಿಎಯನ್ನು ಬೆಂಬಲಿಸಲಿದೆಯೋ ಇಲ್ಲ ಎನ್‌ಡಿಎಯನ್ನು ಬೆಂಬಲಿಸಲಿಯೋ ಎಂಬುದಾಗಿ ಸ್ಪಷ್ಟಪಡಿಸಿರಲಿಲ್ಲ.
ನೀವು ಪ್ರಧಾನಿ ಆಕಾಂಕ್ಷಿಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಟ್ನಾಯಕ್, ನಕಾರಾತ್ಮಕ ಉತ್ತರ ನೀಡಿದ್ದು, ತಾನು ಒರಿಸ್ಸಾದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಲು ಮತ್ತು ಒರಿಸ್ಸಾದ ಜನತೆಗಾಗಿ ದುಡಿಯಲು ಇಷ್ಟಪಡುವುದಾಗಿ ತಿಳಿಸಿದರು.
ಪ್ರಧಾನಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ ನವೀನ್ ಪಟ್ನಾಯಕ್ ಅವರನ್ನು ಸಿಪಿಐ ಮುಖ್ಯಸ್ಥ ಎ.ಬಿ. ಬರ್ಧನ್ ಅವರು ಭೇಟಿಯಾಗ ಬಳಿಕ ಪಟ್ನಾಯಕ್ ಮೇಲಿನ ಹೇಳಿಕೆಗಳನ್ನು ನೀಡಿದ್ದಾರೆ. ಪಟ್ನಾಯಕ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬರ್ಧನ್, "ನಮಗೆ ಪ್ರಧಾನಿ ಅಭ್ಯರ್ಥಿಗಳ ಕೊರತೆ ಇದೆ ಎಂದು ಭಾವಿಸಿದ್ದಿರಾ? ಎಂದು ತಿರುಗಿ ಪ್ರಶ್ನಿಸಿದರು.
ಎಡಪಕ್ಷಗಳ ಪ್ರಮುಖ ನಾಯಕರನ್ನು ಭೇಟಿಯಾದ ಬಳಿಕವೂ ಬಿಜೆಡಿ ತೃತೀಯರಂಗ ಸೇರಲಿದೆಯೇ ಎಂಬುದನ್ನು ಪಟ್ನಾಯಕ್ ಸ್ಪಷ್ಟವಾಗಿ ತಿಳಿಸಲಿಲ್ಲ. |