ಇಲ್ಲಿನ ಇಂಡಿಯನ್ ಇನ್ಸಿಟಿಟ್ಯೂಟ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳು ರಾಜ್ಯದ ಭಯೋತ್ಪಾದನಾ ವಿರೋಧಿ ಪಡೆಯ ಸಹಯೋಗದೊಂದಿಗೆ ಉಗ್ರವಾದದ ಕುರಿತು ಜನತೆಯಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಅಹಮದಾಬಾದ್ ಮತ್ತು ಗಾಂಧಿನಗರದ 50 ಪದವಿ ಕಾಲೇಜುಗಳ ಯುವಕ-ಯುವತಿಯರಿಗೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.
"ನಾವು ಐಐಎಂ ವಿದ್ಯಾರ್ಥಿಗಳೊಂದಿಗೆ ಭಯೋತ್ಪಾದನಾ ದಾಳಿಗಳನ್ನು ನಿಭಾಯಿಸುವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜತೆ ಸೇರಿದ್ದೇವೆ. ಈ ವಿದ್ಯಾರ್ಥಿಗಳು ಪದವಿ ಕಾಲೇಜುಗಳ ಯುವಕಯವತಿಯರಿಗೆ ತರಬೇತಿ ನೀಡುತ್ತಿದ್ದು, ಈ ಮೂಲಕ ಭಯೋತ್ಪಾದನೆಯ ಕುರಿತ ಜಾಗೃತಿಯನ್ನು ಜನತೆಗೆ ತಲುಪಿಸಬಹುದಾಗಿದೆ" ಎಂದು ಗುಜರಾತ್ ಎಟಿಎಸ್ ಮುಖ್ಯಸ್ಥ ಅಜಯ್ ತೋಮರ್ ಹೇಳಿದ್ದಾರೆ.
ಭಯೋತ್ಪಾದನಾ ದಾಳಿ ಎದುರಾದರೆ, ಇಂತಹ ಸಂದರ್ಭದಲ್ಲಿ ಏನನ್ನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಕುರಿತು ಒಂದು ಪಠ್ಯವನ್ನೂ ಸಿದ್ಧಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಆರಂಭಿಸಿರುವ ಗ್ಲೋಬಲೈಸಿಂಗ್ ರಿಸರ್ಜಂಟ್ ಇಂಡಿಯಾ ತ್ರೂ ಇನ್ನೊವೇಟಿವ್ ಟ್ರಾನ್ಸ್‌ಫಾರ್ಮೇಶನ್(ಗ್ರಿಟ್) ಎಂಬ ಕೋರ್ಸಿನಿಂದ ಸ್ಫೂರ್ತಿಗೊಂಡಿರುವ ಬಿ-ಸ್ಕೂಲ್ ವಿದ್ಯಾರ್ಥಿಗಳು ಭಯೋತ್ಪಾದನೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೂರ್ಣಪ್ರಮಾಣದಲ್ಲಿ ಪಾಲ್ಗೊಳ್ಳಲಿದ್ದಾರೆ.
"ನಾವು ಗ್ರಿಟ್ ಮೂಲಕ ಭಯೋತ್ಪಾದನೆ ಕುರಿತು ನಿಕಟವಾಗಿ ಅಧ್ಯಯನ ಮಾಡಿದ್ದೇವೆ. ಇದೀಗ ಅದನ್ನು ಕಾರ್ಯರೂಪಕ್ಕೆ ತರುವ ಅವಕಾಶ ಲಭಿಸಿದೆ" ಎಂದು ಐಐಎಂ-ಎ ವಿದ್ಯಾರ್ಥಿ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶ್ರೀಜನ್ಪಾಲ್ ಸಿಂಗ್ ಹೇಳಿದ್ದಾರೆ. |