ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಮತದಾರರನ್ನು ಸೆಳೆಯುವ ಘೋಷಣೆ ಆರಂಭವಾಗಿದೆ. ಇದರ ಮೊದಲ ಹಂತ ಎಂಬಂತೆ, ಅಧಿಕಾರಕ್ಕೆ ಬಂದರೆ ಎಲ್ಲ ಕಡು ಬಡ ಕುಟುಂಬಗಳಿಗೆ ಮೊಬೈಲ್ ಫೋನ್, 1ಕೋಟಿ ವಿದ್ಯಾರ್ಥಿಗಳಿಗೆ 10 ಸಾವಿರ ರೂಪಾಯಿಗೆ ಲ್ಯಾಪ್‌ಟಾಪ್, ಅದನ್ನು ಖರೀದಿಸಲು ಆಗದಿದ್ದವರಿಗೆ ಬಡ್ಡಿರಹಿತ ಸಾಲ ಹಾಗೂ ಬಹುಪಯೋಗಿ ರಾಷ್ಟ್ರೀಯ ಗುರುತಿನ ಚೀಟಿ ವ್ಯವಸ್ಥೆ ಜಾರಿಗೆ ತರುವುದಾಗಿ ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ ಘೋಷಿಸಿದ್ದಾರೆ.
ಬಿಜೆಪಿಯ ಮಾಹಿತಿ ತಂತ್ರಜ್ಞಾನ ದೂರದೃಷ್ಟಿ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ್ದ ಅವರು, ದೇಶದಲ್ಲಿ 1,2ಕೋಟಿ ಐಟಿ ಆಧರಿತ ಉದ್ಯೋಗ ಸೃಷ್ಟಿಸಲಾಗುತ್ತದೆ. ಇದರರ್ಥ ದೇಶದ ಪ್ರತಿ ಗ್ರಾಮದಲ್ಲೂ 20ಐಟಿ ಉದ್ಯೋಗಗಳು ಸಿಗಲಿವೆ ಎಂದರು.
ಮುಂದಿನ ಐದು ವರ್ಷಗಳಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆಯನ್ನು 40ಕೋಟಿಯಿಂದ 100ಕೋಟಿಗೆ ಏರಿಸಲಾಗುತ್ತದೆ. ಇದಕ್ಕಾಗಿ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ ಉಚಿತ ಮೊಬೈಲ್ ಫೋನ್ ವಿತರಿಸಲಾಗುತ್ತದೆ ಎಂದು ಹೇಳಿದರು.
ಬಹುಪಯೋಗಿ ರಾಷ್ಟ್ರೀಯ ಗುರುತಿನ ಚೀಟಿಯನ್ನು ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಪ್ರದ್ಯುತ್ ಬೋರಾ ತಿಳಿಸಿದರು. |