ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಫರ್ಧಿಸಲು ಒಂದಾಗಿರುವ ತೃತೀಯ ರಂಗದ ಅಂಗಪಕ್ಷಗಳ ನಾಯಕರಿಗೆ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)ದ ನಾಯಕಿ ಮಾಯಾವತಿ ಏರ್ಪಡಿಸಿದ್ದ ಔತಣಕೂಟದಲ್ಲಿ ಎಐಎಡಿಎಂಕೆ ನಾಯಕಿ ಜಯಲಲಿತಾ ಅಥವಾ ಅವರ ಪ್ರತಿನಿಧಿ ಭಾಗವಹಿಸಲಿಲ್ಲ. ತುಮಕೂರಿನಲ್ಲಿ ತೃತೀಯರಂಗದ ಅನಾವಣದ ವೇಳೆ ಭಾಗವಹಿಸಿದ್ದ ಎಲ್ಲಾ ಪಕ್ಷಗಳನ್ನು ಮಾಯವತಿ ಆಹ್ವಾನಿಸಿದ್ದರೂ ಜಯಲಲಿತಾ ಏಕೆ ಪಾಲ್ಗೊಂಡಿಲ್ಲ ಎಂಬುದು ತಿಳಿಯಲಿಲ್ಲ.ಆದರೆ ಆಶ್ಚರ್ಯ ಕೆರಳಿಸುವಂತೆ, ಎಐಎಡಿಎಂಕೆ ನಾಯಕ ವಿ. ಮೈತ್ರೇಯನ್ ಅವರು ಬಿಎಸ್ಪಿ ಹೊರತು ಪಡಿಸಿದ ತೃತೀಯ ರಂಗದ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಸಭೆಯ ಮೂರು ಗಂಟೆಯ ಬಳಿಕ ನಡೆದ ಔತಣ ಕೂಟದಲ್ಲಿ ಅವರು ಇರಲಿಲ್ಲ. ಈ ಸಭೆಯು ಸಿಪಿಐ(ಎಂ) ಮುಖ್ಯ ಕಚೇರಿಯಲ್ಲಿ ನಡೆದಿತ್ತು. ತೃತೀಯ ರಂಗದ ನಾಯಕರ ಸಭೆಯಲ್ಲಿ ಭಾಗವಹಿಸಲು ಮಾತ್ರವೇ ತನಗೆ ಪಕ್ಷದ ವರಿಷ್ಠರು ಸೂಚಿಸಿದ್ದರು ಎಂಬುದಾಗಿ ಮೈತ್ರೇಯನ್ ಹೇಳಿದ್ದಾರೆ. ಔತಣಕೂಟಕ್ಕೆ ತೆರಳುವ ಮುನ್ನ 10 ಪಕ್ಷಗಳ ನಾಯಕರು ಹೇಳಿಕೆಯೊಂದನ್ನು ನೀಡಿದ್ದು, ಮುಂದಿನ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸಲು ಒಟ್ಟಾಗಿ ದುಡಿಯುವುದಾಗಿ ಹೇಳಿದ್ದಾರೆ. |