ಹಿಮಾಚಲ ಪ್ರದೇಶದ ವೈದ್ಯಕೀಯ ಕಾಲೇಜೊಂದರಲ್ಲಿ ನಡೆದ ರ‌್ಯಾಗಿಂಗ್‌ನಿಂದಾಗಿ ಕಿರಿಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಹಾಗೂ, ಆಂಧ್ರದ ಎಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಪ್ರಯತ್ನಿಸಿದೆ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಹಿಮಾಚಲ ಪ್ರದೇಶ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳಿಗೆ ನೋಟೀಸು ನೀಡಿದೆ.
ಹಿಮಾಚಲ ಪ್ರದೇಶದ ರಾಜೇಂದ್ರ ಪ್ರಸಾದ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಅಮನ್ ಕಚ್ರು ಎಂಬ ವಿದ್ಯಾರ್ಥಿ ಹಿರಿಯ ವಿದ್ಯಾರ್ಥಿಗಳ ಹಲ್ಲೆಯಿಂದಾಗಿ ಸಾವನ್ನಪ್ಪಿದ್ದರೆ, ಬಾಪಟ್ಲ ಕೃಷಿ ಹಾಗೂ ಎಂಜೀನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಾಕೆಗೆ ಆಕೆಯ ಹಿರಿಯ ವಿದ್ಯಾರ್ಥಿನಿಯರು ಬೆತ್ತಲೆಯಾಗಿ ನರ್ತಿಸಬೇಕೆಂಬ ಕಿರುಕುಳ ನೀಡಿದ್ದು, ಇದರಿಂದ ಬೇಸತ್ತಿದ್ದ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು.
ಈ ಎರಡು ರಾಜ್ಯಗಳ ಡಿಜಿಗಳು, ಪ್ರಕರಣಗಳ ಕುರಿತು ಎರಡು ವಾರಗಳೊಳಗಾಗಿ ವರದಿಗಳನ್ನು ಸಲ್ಲಿಸಬೇಕಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 30ರಂದು ನಿರ್ಧರಿಸಲಾಗಿದೆ.
ಇದಲ್ಲದೆ ಎರಡೂ ಕಾಲೇಜುಗಳ ಪ್ರಾಂಶುಪಾಲರು ಹಾಗೂ ರಿಜಿಸ್ಟ್ರಾರ್ ಅವರುಗಳಿಗೂ ಶೋಕಾಸ್ ನೀಡಿದ್ದು, ರ‌್ಯಾಗಿಂಗ್ ಕುರಿತ ನ್ಯಾಯಾಲಯದ ಹಿಂದಿನ ಆದೇಶಗಳನ್ನು ಅನುಸರಿಸದಿರುವುದಕ್ಕೆ ಯಾಕೆ ನ್ಯಾಯಾಲಯ ನಿಂದನೆ ಪ್ರಕ್ರಿಯೆ ಆರಂಭಿಸಬಾರದು ಎಂದು ಕೇಳಿದೆ. |