ಬಿಹಾರದಲ್ಲಿ ರಾಜೀಸೂತ್ರದೊಂದಿಗೆ ಲೋಕಸಭಾ ಚುನಾವಣೆ ಎದುರಿಸಲು ನಿರ್ಧರಿಸಿರುವ ಆರ್‌ಜೆಡಿ ಮತ್ತು ಎಲ್‌ಜೆಪಿ ಪಕ್ಷಗಳು ತಮ್ಮ ನಡುವಿನ ಸೀಟು ಹಂಚುವಿಕೆ ಪ್ರಕ್ರಿಯೆಯನ್ನು ಮಂಗಳವಾರ ಅಂತಿಮಗೊಳಿಸಿದ್ದು, ಲಾಲೂ ಅವರ ಆರ್‌ಜೆಡಿಯು 25 ಸ್ಥಾನಗಳಿಂದ ಸ್ಫರ್ಧಿಸಿದರೆ, ಪಾಸ್ವಾನ್ ಅವರ ಎಲ್‌ಜೆಪಿಯು 12 ಸ್ಥಾನಗಳಿಂದ ಸ್ಫರ್ಧಿಸಲಿದ್ದು, ಉಳಿದಿರುವ ಅತ್ಯಲ್ಪ ಸಂಖ್ಯೆಯ ಮೂರು ಸ್ಥಾನಗಳನ್ನು ಕಾಂಗ್ರೆಸ್ ಪಾಲಿಗೆ ಬಿಟ್ಟಿವೆ." ಆರ್‌ಜೆಡಿ ಮತ್ತು ಎಲ್‌ಜೆಪಿಗಳು ಬಿಹಾರದಲ್ಲಿ ಒಟ್ಟಾಗಿ ಚುನಾವಣೆಯಲ್ಲಿ ಸ್ಫರ್ಧಿಸಲು ನಿರ್ಧರಿಸಲಾಗಿದೆ. ಆರ್‌ಜೆಡಿಯು 25 ಸ್ಥಾನಗಳಲ್ಲಿ ಸ್ಫರ್ಧಿಸಿದರೆ, ಎಲ್‌ಜೆಪಿ 12 ಸ್ಥಾನಗಳಲ್ಲಿ ಸ್ಫರ್ಧಿಸಲಿದೆ. ನಾವು ಉಳಿದ ಮೂರು ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟಿದ್ದೇವೆ" ಎಂದು ಲಾಲು ಹಾಗೂ ಪಾಸ್ವಾನ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.2004 ರ ಚುನಾವಣೆಯಲ್ಲಿ ಆರ್‌ಜೆಡಿ 26 ಸ್ಥಾನಗಳಲ್ಲಿ ಸ್ಫರ್ಧಿಸಿತ್ತು. ಎಲ್‌ಜೆಪಿ ಎಂಟು ಕ್ಷೇತ್ರಗಳಲ್ಲಿ ಸ್ಫರ್ಧಿಸಿತ್ತು. ಕಾಂಗ್ರೆಸ್ ನಾಲ್ಕು ಸ್ಥಾನಗಳಲ್ಲಿ ಸ್ಫರ್ಧಿಸಿದರೆ, ಉಳಿದೆರಡು ಸ್ಥಾನಗಳಲ್ಲಿ ಎನ್‌ಸಿಪಿ ಮತ್ತು ಸಿಪಿಐ ಸ್ಫರ್ಧಿಸಿತ್ತು." ನಾವೀಗಲೂ ಯುಪಿಎ ಜತೆಗಿದ್ದೇವೆ ಮತ್ತು ಭವಿಷ್ಯದಲ್ಲೂ ಕಾಂಗ್ರೆಸ್ ಜತೆಗಿರುತ್ತೇವೆ. ನಮಗೂ ತೃತೀಯ ರಂಗಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಉದ್ದೇಶ ಕೋಮುವಾದಿ ಶಕ್ತಿಗಳನ್ನು ಸೋಲಿಸುವುದೇ ಆಗಿದೆ" ಎಂದು ಲಾಲು ಈ ಸಂದರ್ಭದಲ್ಲಿ ನುಡಿದರು.ಯುಪಿಎಯ 2004ರ ಕಾರ್ಯಕ್ಷಮತೆಯು ಮರುಕಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಪಕ್ಷಗಳು ಒಂದಾಗಿರುವುದಾಗಿ ತಿಳಿಸಿದರು. |