ಹಿಂಸಾತ್ಮಕ ಪ್ರತಿಭಟನೆ ವೇಳೆ ಉಂಟಾಗುವ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳ ನಷ್ಟ ಭರ್ತಿಗೆ ಪ್ರತಿಭಟನೆಗೆ ಕರೆನೀಡಿರುವ ಸಂಘಟನೆಗಳ ನಾಯಕರನ್ನು ಬಾಧ್ಯವಾಗಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಅದು ಸರ್ಕಾರ ಅಥವಾ ಖಾಸಗೀ ಸೊತ್ತಾಗಿರಲಿ, ಸೊತ್ತಿನ ಮಾಲಕರಿಗೆ ನಷ್ಟಭರ್ತಿ ಮಾಡುವಂತೆ ಪ್ರತಿಭಟನೆಯ ಕಾರಣಕರ್ತರಿಗೆ ನಿರ್ದೇಶನ ನೀಡುವುದಾಗಿ ನ್ಯಾಯಾಲಯ ಹೇಳಿದೆ.
ಗುಜ್ಜಾರ್ ಪ್ರತಿಭಟನೆಯಂತಹ ಸಮಯದಲ್ಲಿ ಮತ್ತೆ ಮತ್ತೆ ರೈಲ್ವೇ ಹಳಿಗಳು ಮತ್ತು ಇತರ ಸಾರ್ವಜನಿಕ ಆಸ್ತಿಗಳಿಗೆ ಮಾಡಲಾಗಿರುವ ಹಾನಿಯಂತಹ ಹಿಂಸಾತ್ಮಕ ಪ್ರತಿಭಟನೆಯನ್ನು ತಡೆಯಲು 1984ರ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯು ಅಸಮರ್ಪಕವಾಗಿದೆ ಎಂಬುದು ಮನವರಿಕೆಯಾಗಿರುವ ಹಿನ್ನೆಲೆಯಲ್ಲಿ, ಸರ್ಕಾರವು ಸೂಕ್ತ ತಿದ್ದುಪಡಿಯ ಮೂಲಕ ಕಾನೂನಿಗೆ ಶಕ್ತಿ ನೀಡುವ ತನಕ ಸರ್ವೋಚ್ಛ ನ್ಯಾಯಾಲಯವು ವಿಸ್ತೃತವಾದ ಮಾರ್ಗದರ್ಶಿ ಸೂತ್ರಗಳ ಮೂಲಕ ಹಸ್ತಕ್ಷೇಪ ಮಾಡಲು ಇದು ಸಕಾಲ ಎಂದು ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್ ಹಾಗೂ ಎ.ಕೆ. ಗಂಗೂಲಿ ಅವರನ್ನೊಳಗೊಂಡ ನ್ಯಾಯಪೀಠವು ನಿರ್ಧರಿಸಿದೆ.
ಅಮಿಕಸ್ ಕ್ಯೂರಿ ರಾಜೀವ್ ಧವನ್ ಹಾಗೂ ಸಾಲಿಸಿಟರ್ ಜನರಲ್ ಜಿ.ಇ. ವಹಾನ್ವತಿ ಅವರಿಗೆ ಮಾರ್ಗದರ್ಶಿ ಸೂತ್ರಗಳಿಗೆ ಸಲಹೆಗಳನ್ನು ನೀಡಲು ಸೂಚಿಸಲಾಗಿದ್ದು, ಹಿಂಸಾತ್ಮಕ ಪ್ರತಿಭಟನೆಯ ವೇಳೆಗೆ ಆಸ್ತಿಪಾಸ್ತಿಗಳಿಗೆ ಉಂಟಾಗುವ ಹಾನಿಯನ್ನು ತಡೆಯಲು ಇದನ್ನು ತಕ್ಷಣವೇ ಜಾರಿಗೆ ತರಬೇಕಿದೆ ಎಂದು ಹೇಳಿದೆ.
ಹಿಂಸಾತ್ಮ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರ ಆಂಗಿಕ ಅಭಿವ್ಯಕ್ತಿಯು ತಾವು ದೇಶ ಸೇವೆ ಮಾಡುತ್ತೇವೆ ಎಂಬಂತೆ ಇರುತ್ತದೆ. ಆದರೆ ನಿಜವಾಗಿಯೂ ಅವರು ರಾಷ್ಟ್ರಕ್ಕೆ ನಾಚಿಕೆಗೇಡಿನ ಕೃತ್ಯ ಎಸಗುತ್ತಾರೆ ಎಂದು ನ್ಯಾಯಪೀಠ ಹೇಳಿದೆ.
ಪ್ರತಿಭಟನೆಗೆ ಕರೆ ನೀಡಿರುವವರು ಅಥವಾ ಇದರ ಹಿಂದಿನ ಮನಸ್ಸುಗಳು ಎಲ್ಲಿಯೋ ಇರುತ್ತವೆ. ಇಂತಹವರು ಆಸ್ತಿ ಹಾನಿಗೆ ಮೂಲಕಾರಣಕರ್ತರು. ಆದರೆ ಕ್ಯಾಮರಾಗಳಲ್ಲಿ ಸೆರೆಸಿಕ್ಕುವವರು ಮಾತ್ರ ಬೇರೆ ಯಾರೋ ಆಗಿರುತ್ತಾರೆ ಎಂದು ಕೋರ್ಟ್ ಹೇಳಿದೆ. |