ವ್ಯಕ್ತಿಯೊಬ್ಬ ಹಣದಾಸೆಗಾಗಿ ತನ್ನ ಹೆತ್ತಮಗಳ ಮೇಲೆಯೇ ಸತತ ಒಂಬತ್ತು ವರ್ಷಗಳ ಕಾಲ ಅತ್ಯಾಚಾರ ಎಸಗಿರುವ ಪಾಶವೀ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಮುಂಬೈಯ ಮೀರಾ ರಸ್ತೆಯ ವ್ಯಾಪಾರಿಯೊಬ್ಬನ್ನು ಈ ಸಂಬಂಧ ಬಂಧಿಸಲಾಗಿದೆ. "ಹೀಗೆ ಮಾಡಿದರೆ ನೀನು ಶ್ರೀಮಂತನಾಗುತ್ತಿಯಾ" ಎಂಬುದಾಗಿ ಸ್ವಘೋಷಿತ ಮಾಂತ್ರಿಕನೊಬ್ಬ ನೀಡಿರುವ ಸಲಹೆ ಮೇಲೆ ಆತ ಈ ಕೃತ್ಯ ಎಸಗಿದ್ದಾನೆನ್ನಲಾಗಿದೆ.
ಇದಲ್ಲದೆ, ಈ ವ್ಯಕ್ತಿಯ ಕಿರಿಯ ಪುತ್ರಿಯನ್ನು ಸ್ವತಹ ಮಾಂತ್ರಿಕ ತನ್ನ ಕಾಮದಾಹಕ್ಕೆ ಬಳಸಿಕೊಂಡಿದ್ದಾನೆ. ತಾನು ಶ್ರೀಮಂತನಾಗುವ ಬಯಕೆಯಲ್ಲಿ ವ್ಯಾಪಾರಿ ಇದಕ್ಕೂ ಅವಕಾಶ ನೀಡಿದ್ದಾನೆ.
"ತಮ್ಮ ಮೇಲೆ ತಂದೆ ಸತತ ಒಂಬತ್ತು ವರ್ಷಗಳ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಈ ಹುಡುಗಿಯರು ತಿಳಿಸಿದ್ದಾರೆ. ಶ್ರೀಮಂತನಾಗಬೇಕು ಎಂಬ ಆತನ ದುರಾಸೆಗೆ ಮಾಂತ್ರಿಕ ಈ ಸಲಹೆ ನೀಡಿದ್ದ. ಅಲ್ಲದೆ ಮಾಂತ್ರಿಕ ಕಿರಿಯ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದ. ದುರಂತವೆಂದರೆ ಹೆತ್ತ ತಾಯಿ ತನ್ನ ಪತಿಯ ಈ ವಿಕೃತ ಕಾರ್ಯವನ್ನು ತಡೆಯುವ ಬದಲಿಗೆ, ಬೆಂಬಲ ನೀಡಿದ್ದಳು" ಎಂಬುದಾಗಿ ಪೊಲೀಸಧಿಕಾರಿ ಮುಕುಂದ್ ಮಹಾಜನ್ ಹೇಳಿದ್ದಾರೆ.
ಈ ಹೇಯಕೃತ್ಯ ಆರಂಭದ ವೇಳೆ ಹಿರಿಯ ಮಗಳು ಬರಿಯ 11 ವರ್ಷದವಳಾಗಿದ್ದಳು. ಕೆಲವು ತಿಂಗಳ ಹಿಂದೆ ಈ ಮಾಂತ್ರಿಕ, ವ್ಯಾಪಾರಿಯ ಕಿರಿಯ ಮಗಳ ಮೇಲೆ ತನ್ನ ಕಾಕ ದೃಷ್ಟಿ ಬೀರಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಲು ಆಂಭಿಸಿದ ಎಂದು ದೂರಿನಲ್ಲಿ ಹೇಳಲಾಗಿದೆ. ಆಕೆಯೀಗ 15ರ ಹರೆಯದವಳು. ಕೊನೆಗೂ ಈ ಕಿರುಕುಳ ತಡೆಯಲಾರದ ಮಕ್ಕಳು ತಮ್ಮ ಗೋಳನ್ನು ಅಜ್ಜಿ ಹಾಗೂ ಮಾವನ ಬಳಿ ಹೇಳಿಕೊಂಡಿದ್ದಾರೆ.
"ಇವೆಲ್ಲದಕ್ಕೂ ಆ ಮಾಂತ್ರಿಕ ಕಾರಣ. ಅವರೆಲ್ಲರನ್ನು ಗಲ್ಲಿಗೇರಿಸಬೇಕು" ಎಂಬುದಾಗಿ ಮಕ್ಕಳ ಮಾವ ಕ್ರೋಧ ವ್ಯಕ್ತಪಡಿಸುತ್ತಾರೆ.
ಇದೀಗ ಪೊಲೀಸರು ವ್ಯಾಪಾರಿ, ಇಂತಹ ಸಲಹೆ ನೀಡಿದ ದುರುಳ ಮಾಂತ್ರಿಕ ಹಾಗೂ ಇವುಗಳಿಗೆ ಪ್ರೋತ್ಸಾಹ ನೀಡಿದ ಅಮ್ಮನನ್ನೂ ಬಂಧಿಸಿದ್ದಾರೆ. |