ನವದೆಹಲಿ: ಮಹಾ ಚುನಾವಣೆಯ ಬಳಿಕ ಪರ್ಯಾಯ ಸರ್ಕಾರ ಒಂದನ್ನು ರೂಪಿಸಲು ಕಾಂಗ್ರೆಸ್ ಜತೆ ಮಾತುಕತೆ ನಡೆಸಲು ತಾನು ಮುಕ್ತವಾಗಿರುವುದಾಗಿ ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದ್ದಾರೆ.
"ನಾವು ಅವರೊಂದಿಗೆ ವ್ಯವಹರಿಸಬಹುದು. ಅಲ್ಲದೆ ಪರ್ಯಾಯ ಜಾತ್ಯತೀತ ಸರ್ಕಾರ ಒಂದನ್ನು ರೂಪಿಸಲು ಬೆಂಬಲಿಸುವಂತೆ ವಿನಂತಿಸಬಹುದು. ಇದು ಸಾಧ್ಯ. ಏಕೆ ಸಾಧ್ಯವಿಲ್ಲ? ಇದನ್ನು ನಾನು ತಳ್ಳಿಹಾಕಲಾರೆ" ಎಂಬುದಾಗಿ ಕಾರಟ್ ಅವರು ಖಾಸಗೀ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಮಿತ್ರಕೂಟಗಳಿಗೆ ಪರ್ಯಾಯವಾಗಿ ತೃತೀಯರಂಗವನ್ನು ಹುಟ್ಟುಹಾಕಲು ಪ್ರಮುಖ ಪಾತ್ರ ವಹಿಸಿದ್ದ ಕಾರಟ್ ಅವರ ಈ ಹೇಳಿಕೆ ಅಚ್ಚರಿ ಮೂಡಿಸಿದೆ.
ಸರ್ಕಾರವು ಅಮೆರಿಕದೊಂದಿಗೆ ನಾಗರಿಕ ಅಣುಒಪ್ಪಂದ ಪ್ರಕ್ರಿಯೆಯಲ್ಲಿ ಮುಂದುವರಿಯುವುದನ್ನು ವಿರೋಧಿಸಿ ಎಡಪಕ್ಷಗಳು ಯುಪಿಎ ಮೈತ್ರಿಕೂಟದಿಂದ ಹೊರಬಂದಿದ್ದವು.
"ಇದು ಅಸ್ಪಶೃತೆಯ ಪ್ರಶ್ನೆಯಲ್ಲ. ನಾವು ಎಲ್ಲಾ ಪಕ್ಷದೊಂದಿಗೆ ವ್ಯವಹರಿಸಬಹುದು. ಆದರೆ, ಆ ವ್ಯವಹಾರವು ಜನಾದೇಶದ ಸ್ವರೂಪಕ್ಕೆ ಮಿತವಾಗಿದೆ" ಎಂದು ಕಾರಟ್ ಹೇಳಿದ್ದಾರೆ.
ಯುಪಿಎ ಸರ್ಕಾರವನ್ನು ಬೆಂಬಲಿಸಿದ್ದ ಹಲವು ಎಡಪಕ್ಷಗಳಲ್ಲಿ ಸಿಪಿಐ-ಎಂ ಅತಿ ದೊಡ್ಡ ಪಕ್ಷವಾಗಿತ್ತು. ಕಾರಟ್ ಅವರ ಹೇಳಿಕೆಯು, ಎಡಪಕ್ಷಗಳೂ ಇನ್ನೂ ಕಾಂಗ್ರೆಸ್‌ಗೆ ಬೆಂಬಲ ನೀಡಬಹುದು ಎಂಬ ಸೂಚನೆ ರವಾನಿಸಿದೆ. |