ಬಹುಕೋಟಿ ಛಾಪಾಕಾಗದ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂಲಾಲ ತೆಲಗಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಗುಜರಾತಿಗೆ ಸಂಬಂಧಿಸಿದ ನಕಲಿ ಛಾಪಾಕಾಗದ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯ ತೆಲಗಿಯನ್ನು ತಪ್ಪಿತಸ್ಥನೆಂದು ತೀರ್ಮಾಸಿದೆ.
ತನ್ನ ಅನಾರೋಗ್ಯದ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ಕನಿಷ್ಠಗೊಳಿಸಬೇಕು ಎಂಬುದಾಗಿ ತೆಲಗಿ, ಶಿಕ್ಷೆ ವಿಧಿಸಿದ ನ್ಯಾಯಾಧೀಶ ಎ.ಪಿ.ಗೋಹಿನ್ ಅವರನ್ನು ವಿನಂತಿಸಿದ್ದಾನೆ.
ಬುಧವಾರ ತೆಲಗಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ ಎಂಬುದಾಗಿ ಆತನ ವಕೀಲ ಭರತ್ ಜೋಷಿ ಹೇಳಿದ್ದಾರೆ. ಅಲ್ಲದೆ ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಸಾದಿಕ್ ಹಾಗೂ ಸಿದ್ದಾರ್ಥ ಗಾಂಧಿ ಎಂಬಿಬ್ಬರೂ ತಪ್ಪೊಪ್ಪಿಕೊಂಡಿರುವುದಾಗಿ ಜೋಷಿ ತಿಳಿಸಿದ್ದಾರೆ.
ತೆಲಗಿ ಹಲವು ಖಾಯಿಲೆಗಳಿಗೆ ತುತ್ತಾಗಿರುವ ಕಾರಣ ತನಗೆ ಕನಿಷ್ಠ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯವನ್ನು ಕೋರಿದನೆಂದು ಜೋಷಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗುಜರಾತಿನಾದ್ಯಂತ ವಿವಿಧೆಡೆ ದಾಳಿ ನಡೆಸಿದ್ದ ಸಿಬಿಐ 25 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಮುಖಬೆಲೆಯ ನಕಲಿ ಛಾಪಾಕಾಗದವನ್ನು ಪತ್ತೆ ಹಚ್ಚಿದೆ. ಈ ಹಗರಣವು ಪ್ರಥಮವಾಗಿ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿತ್ತು.
|