ನವದೆಹಲಿ: ಕೊನೆಗೂ ಮೌನ ಮುರಿದಿರುವ ಪ್ರಧಾನಿ ಮನಮೋಹನ್ ಸಿಂಗ್, ವರುಣ್‌ಗಾಂಧಿ ಅವರ ಮುಸ್ಲಿಂ ವಿರೋಧಿ ಭಾಷಣವನ್ನು ಖಂಡಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ರಕ್ಷಣಾ ಪದವಿಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿಯವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವರುಣ್ ಗಾಂಧಿ ಅಂತಹ ಹೇಳಿಕೆಗಳನ್ನು ನೀಡಿದ್ದರೆ ಅದು ದುರದೃಷ್ಟಕರ ಎಂದು ಪ್ರತಿಕ್ರಿಸಿದ್ದಾರೆ.
ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ 29ರ ಹರೆಯದ ವರುಣ್ ಗಾಂಧಿ ತನ್ನ ಮುಸ್ಲಿಂ ವಿರೋಧಿ ಭಾಷಣದಿಂದಾಗಿ ವಿವಾದಕ್ಕೆ ಸಿಲುಕಿದ್ದಾರೆ.
"ಕೋಮುವಾದ ಮತ್ತು ಜಾತೀಯತೆಯು ನಾವು ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳು. ಇದರ ವಿರುದ್ಧ ದೃಢಸಂಕಲ್ಪದ ಹೋರಾಟ ನಡೆಸಬೇಕಿದೆ" ಎಂದು ನುಡಿದರು.
ಎರಡು ತಿಂಗಳ ಹಿಂದೆ ಬೈಪಾಸ್ ಸರ್ಜರಿಗೀಡಾಗಿರುವ ಸಿಂಗ್ ಅವರು, ತಮ್ಮ ಆರೋಗ್ಯಉತ್ತಮವಾಗಿದ್ದು. ತಾನು ಚುನಾವಣಾ ಪ್ರಚಾರಕ್ಕೆ ತೊಡಗುವುದಾಗಿ ತಿಳಿಸಿದರು.
ತೃತೀಯ ರಂಗವು ನಮ್ಮ ವಿರೋಧಿ ಎಂದು ಹೇಳಿದ ಅವರು ಇದನ್ನು ನಿರ್ಲಕ್ಷ್ಯಿಸುವಂತಿಲ್ಲ ಎಂದು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಯುಪಿಎಯು ಗೆಲುವು ಸಾಧಿಸಲಿದೆ ಮತ್ತು ಜನತೆಯು ಯುಪಿಎಗೆ ಮತಚಲಾಯಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ನಿಮ್ಮ ವಿರೋಧಿಗಳು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು 'ವಿರೋಧಿಗಳು ವಿರೋಧಿಗಳೇ' ನಾವು ಯಾರನ್ನೂ ಕಡೆಗಣಿಸುವಂತಿಲ್ಲ ಎಂದು ನುಡಿದರು. |