ಇಲ್ಲಿನ ಘಾಟ್ಸಿಲಾ ಎಂಬ ಹಳ್ಳಿಯಲ್ಲಿ ಸಂಗೀತ ಕೇಳಿಸಿದರೆ ದನ ಹೆಚ್ಚು ಹಾಲು ಕೊಡುತ್ತದೆ!
ಸಂಶೋಧನೆಗಳು ಹಿಂದೆಯೇ ಹೀಗೆ ಹೇಳಿದ್ದರೂ ಅದನ್ನು ಯಶಸ್ವಿಯಾಗಿ ಜಾರ್ಖಂಡ್‌ನ ಘಾಟ್ಸಿಲಾ ಹಳ್ಳಿಯ ಫಾರ್ಮ್ ಒಂದರಲ್ಲಿ ಮಾಡಲಾಗುತ್ತಿದೆ. ಇಲ್ಲಿ ಹಸುವಿನಿಂದ ಹಾಲು ಕರೆಯುವಾಗ ಸಂಗೀತ ಕೇಳಿಸುತ್ತಾರಂತೆ. ಸಂಗೀತ ಕೇಳುತ್ತಲೇ ಹಸು ಹೆಚ್ಚು ಹಾಲು ಕೊಡುತ್ತದೆ ಎಂಬುದನ್ನು ಇವರು ಕಂಡುಕೊಂಡಿದ್ದಾರೆ ಕೂಡಾ.
ಆ ಫಾರ್ಮ್‌ನಲ್ಲಿ ಸುಮಾರು 80 ಹಸುಗಳಿವೆಯಂತೆ. ಎಲ್ಲ ಹಸುಗಳೂ ದಿನಾಲೂ ಭಜನೆ ಹಾಗೂ ಇಂಪಾದ ಲಘು ಸಂಗೀತ ಕೇಳುತ್ತವೆ. ಸಂಗೀತ ಕೇಳಲೆಂದೇ ಈ ಹಟ್ಟಿಯಲ್ಲಿ ಮ್ಯೂಸಿಕ್ ಬಾಕ್ಸ್‌ಗಳನ್ನು ಜೋಡಿಸಲಾಗಿದೆ. ಸಂಗೀತ ಕೇಳಲು ಆರಂಭಿಸಿದ ನಂತರ ಹಸು ಹಾಲು ಕೊಡುವುದು ಹೆಚ್ಚಾಗಿದೆ. ಮೊದಲು ದಿನಕ್ಕೆ 175- 180 ಲೀಟರ್ ಹಾಲು ಸಿಗುತ್ತಿದ್ದ ಈ ಫಾರ್ಮ್‌ನಲ್ಲಿ ಈಗ 220 ಲೀಟರ್ ಹಾಲು ಸಿಗುತ್ತದೆ. ಹೀಗಾಗಿ ಸಂಗೀತ ಕೇಳಿದ ನಂತರ ಹಾಲು ಕೊಡುವ ಪ್ರಮಾಣ ಶೇ.6ರಿಂದ ಏಳರಷ್ಟು ಹೆಚ್ಚಾಗಿದೆ.
ಈ ಫಾರ್ಮ್ ನೋಡಿಕೊಳ್ಳುವ ರಂಜಿತ್ ಮಿದ್ಧಾ ಹೇಳುವಂತೆ, ಹಸುಗಳಿಗೆ ಸಂಗೀತ ಕೇಳಿಸಿದ ನಂತರ ಹಾಲು ನೀಡುವ ಪ್ರಮಾಣ ಹೆಚ್ಚಾಗಿದೆ. ಹಾಗೂ ಹಸುಗಳು ತಮ್ಮ ಮನಸ್ಸನ್ನು ಫ್ರೆಶ್ ಆಗಿಡಲು ಈ ಸಂಗೀತ ಸಹಾಯ ಮಾಡುತ್ತದೆ ಎನ್ನುತ್ತಾರೆ.
ಪಶುವೈದ್ಯ ಡಾ.ಮನೀಕ್ ಪಲೀತ್ ಹೇಳುವಂತೆ, ಹಸುಗಳು ತುಂಬ ಪ್ರಶಾಂತವಾದ ವಾತಾವರಣವನ್ನು ಇಷ್ಟಪಡುತ್ತದೆ. ಗದ್ದಲದ ಪರಿಸರದಲ್ಲಿದ್ದರೆ ಅವುಗಳ ಮನಸ್ಸು ಉದ್ವೇಗಗೊಂಡಿರುವುದಲ್ಲದೆ, ಹೆಚ್ಚು ಹಾಲು ನೀಡುವುದಿಲ್ಲ. ಗದ್ದಲವಿಲ್ಲದ ಪರಿಸರದಲ್ಲಿ ಮೃದುವಾದ ಹಿತಮಿತ ಇಂಪು ಸಂಗೀತ ಕೇಳಿಸಿದರೆ ಅವುಗಳ ಮನಸ್ಸು ಪ್ರಫುಲ್ಲವಾಗುತ್ತದೆ. ಜತೆಗೆ ಸಹಜವಾಗಿಯೇ ಹೆಚ್ಚು ಹಾಲನ್ನೂ ನೀಡುತ್ತವೆ ಎನ್ನುತ್ತಾರೆ.
ಇದು ಸತ್ಯ. ಈ ಹಿಂದೆಯೇ ಹಲವು ಸಂಶೋಧನೆಗಳಲ್ಲಿಯೂ ಇದು ಬಹಿರಂಗಗೊಂಡಿದೆ. ಪ್ರಾಣಿಗಳಿಗೆ ಇಂಪಾದ ಸಂಗೀತ ಕೇಳಿಸಿದರೆ ಅವುಗಳ ಮನಸ್ಸು ಸದಾ ಶಾಂತವಾಗಿರುತ್ತದೆ ಎಂದೂ ಹೇಳುತ್ತಾರೆ ಡಾ.ಪಲೀತ್. |