ಕಳೆದ 20 ವರ್ಷಗಳಿಂದ ಒಂದೂ ತಪ್ಪದಂತೆ ನಿರಂತರ ಲೋಕಸಭಾ ಚುನಾವಣೆಗೆ ಸ್ಫರ್ಧಿಸುತ್ತಾ ಬಂದಿರುವ ಶುದ್ಧಚಾರಿತ್ರ್ಯದ ರಾಜಕಾರಣಿ ಎಂಬ ಖ್ಯಾತಿಗೆ ಭಾಜನವಾಗಿರುವ ಹಿರಿಯ ರಾಜಕಾರಣಿ ಜಾರ್ಜ್ ಫರ್ನಾಂಡಿಸ್ ಅವರಿಗೆ ಈ ಸರ್ತಿಯ ಚುನಾವಣೆಗೆ ಸ್ಫರ್ಧಿಸಲು ಟಿಕೆಟ್ ಸಿಕ್ಕಿಲ್ಲ!
ಪಕ್ಷ ಹೇಳುವ ಪ್ರಕಾರ, ಕರ್ನಾಟಕ ಮೂಲದ 79ರ ಹರೆಯದ ಫರ್ನಾಂಡಿಸ್ ಅನಾರೋಗ್ಯ ಪೀಡಿತರಾಗಿರುವ ಕಾರಣ ಅವರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಶಕ್ತಿಯಿಲ್ಲ. ಆದರೆ ಹಠಮಾರಿ ಧೋರಣೆ ತಾಳಿರುವ ಫರ್ನಾಂಡಿಸ್ ಪಕ್ಷೇತರವಾಗಿ ಕಣಕ್ಕಳಿಯಲು ನಿರ್ಧರಿಸಿದ್ದಾರೆ.
ಅವರಿಗೆ ಪಕ್ಷ ಟಿಕೆಟ್ ನೀಡದಿದ್ದರೆ, ಬಿಹಾರದ ಮುಜಾಫರ್‌ಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಫರ್ಧಿಸಲು ನಿರ್ಧರಿಸಿದ್ದಾರೆ.
ಇದೇ ವೇಳೆ ಇನ್ನೊರ್ವ ಪ್ರಮುಖ ನಾಯಕ ದಿಗ್ವಿಜಯ್ ಸಿಂಗ್ ಅವರೂ ಬಂಡಾಯ ಎದ್ದಿದ್ದಾರೆ. ವಿದೇಶಾಂಗ ವ್ಯವಹಾರಗಳ ರಾಜ್ಯಸಚಿವರಾಗಿದ್ದ ಅವರಿಗೂ ಪಕ್ಷ ಟಿಕೆಟ್ ನಿರಾಕರಿಸಿರುವ ಸುದ್ದಿಗಳ ಹಿನ್ನೆಲೆಯಲ್ಲಿ ಅವರು ತಮ್ಮ ಬಾಕಾ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಫರ್ಧಿಸಲು ಯೋಜಿಸುತ್ತಿದ್ದಾರೆ ಎಂದು ಹೇಳಲಾಗಿದೆ. |