ವಿದೇಶದಲ್ಲಿ ಹರಾಜಾಗುತ್ತಿದ್ದ ಟಿಪ್ಪು ಸುಲ್ತಾನನದ ಖಡ್ಗ ಹಾಗೂ ಗಾಂಧೀಜಿಯ ವಸ್ತುಗಳು ಉದ್ಯಮಿ ವಿಜಯ್ ಮಲ್ಯ ಮೂಲಕ ಭಾರತಕ್ಕೆ ತಲುಪಿದೆ. ಇದೀಗ ಭಾರತದ ಮತ್ತೊಂದು ಅಮೂಲ್ಯ ವಸ್ತು ವಿದೇಶದಲ್ಲಿ ಹರಾಜಿಗೆ ಸಿದ್ಧವಾಗಿದೆ. ಕಳೆದ ಹತ್ತು ವರ್ಷಗಳಿಂದ ಬ್ರಿಟನ್‌ನ ಬ್ಯಾಂಕೊಂದರಲ್ಲಿ ಅನಾಥವಾಗಿದ್ದಂತೆ ಇದ್ದ, ಟಿಪ್ಪು ಸುಲ್ತಾನನ ಬೃಹತ್ ಸ್ವರ್ಣ ಸಿಂಹಾಸನದ ಮೇಲಿದ್ದ ಚಿನ್ನದ ಶಿಖರಾಲಂಕಾರವನ್ನು ಇದೀಗ ಲಂಡನ್‌ನಲ್ಲಿ ಹರಾಜು ಹಾಕಲಾಗುತ್ತಿದೆ.
ಟಿಪ್ಪು ಸುಲ್ತಾನನ ಅತ್ಯಂತ ಮಹತ್ವದ ಸೊತ್ತುಗಳಲ್ಲಿ ಒಂದಾಗಿರುವ ಈ ಸ್ವರ್ಣ ಶಿಖರಾಲಂಕಾರವು ಸುಮಾರು 8 ಲಕ್ಷ ಪೌಂಡ್ ಬೆಲೆ ಬಾಳಬಹುದೆಂದು ಹರಾಜುದಾರ ಸಂಸ್ಥೆ ಬೋನ್ಹಾಮ್ಸ್ ಹೇಳಿಕೊಂಡಿದೆ.
ಶ್ರೀರಂಗಪಟ್ಟಣದಲ್ಲಿದ್ದ ಟಿಪ್ಪು ಸುಲ್ತಾನನ ಅಷ್ಟಕೋನಾಕೃತಿಯ ಸ್ವರ್ಣ ಸಿಂಹಾಸನದ ಪ್ರತಿಯೊಂದು ಮೂಲೆಯಲ್ಲಿದ್ದ ಕಲಶದಂತಿರುವ ಅಲಂಕಾರಿಕ ವಸ್ತುಗಳಲ್ಲಿ ಈ ವ್ಯಾಘ್ರಮುಖಾಕೃತಿಯಿರುವ ಶಿಖರಾಲಂಕಾರವೂ ಒಂದು. ಮೈಸೂರಿನ ಹುಲಿಯೆಂದೇ ಖ್ಯಾತವಾಗಿದ್ದ ಟಿಪ್ಪುಗೆ ಹುಲಿಗಳೆಂದರೆ ಇಷ್ಟ ಎಂಬುದಕ್ಕೆ ಈ ಸಿಂಹಾಸನವೂ ಸಾಕ್ಷಿಯಾಗಿತ್ತು. ಆದರೆ ಬ್ರಿಟಿಷರನ್ನು ಸೋಲಿಸುವವರೆಗೆ ಈ ಸಿಂಹಾಸನದಲ್ಲಿ ಕೂರಲಾರೆ ಎಂದು ಶಪಥ ಮಾಡಿದ್ದ ಟಿಪ್ಪುವಿನ ಆಸೆ ಈಡೇರಿರಲಿಲ್ಲ.
ಸುಮಾರು ನೂರು ವರ್ಷಗಳಿಂದ ಬ್ರಿಟಿಷ್ ಕೋಟೆಯೊಂದರಲ್ಲಿ ಇದ್ದ ಈ ಶಿಖರಾಲಂಕಾರ ಆ ಬಳಿಕ ಬ್ಯಾಂಕೊಂದರಲ್ಲಿ 1990ರ ಸುಮಾರಿಗೆ ಈ ಹರಾಜುದಾರರ ವಶಕ್ಕೆ ದೊರೆತಿತ್ತು.
ಎಂಟರಲ್ಲಿ ಎರಡು ಶಿಖರಾಲಂಕಾರಗಳ ಇರುವಿಕೆ ಮಾತ್ರ ಸದ್ಯಕ್ಕೆ ಲಭ್ಯವಿದೆ. ಇನ್ನೊಂದು ಇರುವುದು ವೇಲ್ಸ್‌ನಲ್ಲಿರುವ ಕ್ಲೈವ್ ಕಲೆಕ್ಷನ್ಸ್‌ನಲ್ಲಿ. ಮತ್ತೊಂದು ಶಿಖರಾಲಂಕಾರವು 1970ರ ಅವಧಿಯಲ್ಲಿ ಲಂಡನನ್‌ನ ಡೀಲರ್ ಒಬ್ಬರ ಕೆಟಲಾಗ್‌ನಲ್ಲಿ ಕೆಲವು ಕಾಲ ಕಂಡುಬಂದಿತ್ತಾದರೂ, ಆ ಬಳಿಕ ಯಾರೂ ಕಂಡವರಿಲ್ಲ ಎಂದಿದ್ದಾರೆ ಬೋನ್ಹಾಮ್ಸ್ ಇಂಡಿಯನ್ ಮತ್ತು ಇಸ್ಲಾಮಿಕ್ ಇಲಾಖೆಯ ಕ್ಲೇರ್ ಪೆನ್ಹಾಲುರಿಕ್ ಹೇಳಿದ್ದಾರೆ.
ಏಪ್ರಿಲ್ 2ರಂದು ಹರಾಜಾಗಲಿರುವ ಟಿಪ್ಪುವಿನ ಈ ಅಮೂಲ್ಯ ವಸ್ತುವು ಸದ್ಯಕ್ಕೆ ಈಸ್ಟ್ ಇಂಡಿಯಾ ಕಂಪನಿಯ ಮೇಲ್ವಿಚಾರಕನಾಗಿದ್ದ ಥೋಮಸ್ ವ್ಯಾಲೇಸ್ ಎಂಬಾತನ ಕುಟುಂಬಿಕರ ವಶದಲ್ಲಿದೆ. 1799ರ ಮೇ 4ರಂದು ನಡೆದ ಶ್ರೀರಂಗಪಟ್ಟಣ ಕದನದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ಸೇನೆಯು ಟಿಪ್ಪುವನ್ನು ಸೋಲಿಸಿತ್ತು.
ಟಿಪ್ಪು ವಿರುದ್ಧ ಜಯ ಸಾಧಿಸಿದ ಬ್ರಿಟಿಷರು ಎಷ್ಟೊಂದು ಲಗುಬಗೆಯಿಂದ ಆ ಸ್ವರ್ಣ ಸಿಂಹಾಸನವನ್ನು ಮುರಿದರೆಂದರೆ, ಸಿಂಹಾಸನದ ಉಳಿದ ಭಾಗಗಳು ಎಲ್ಲಿವೆ ಎಂಬುದೇ ಗೊತ್ತಿಲ್ಲ. ಸಿಂಹಾಸನದ ಮುಂಭಾಗದಲ್ಲಿದ್ದ ದೊಡ್ಡ ಹುಲಿಯ ತಲೆಯು ಈಗ ರಾಣಿ ಎಲಿಜಬೆತ್-II ಳ ವಿಂಡ್ಸರ್ ಕ್ಯಾಸಲ್‌ನಲ್ಲಿರುವ ಮನೆಯಲ್ಲಿದೆ. ಅದರ ಜತೆಗೆ ರತ್ನಖಚಿತ ಹಕ್ಕಿಯೂ ಇದೆ.
ವಿಷಾದನೀಯ ಎಂಬಂತೆ ಬ್ರಿಟಿಷರು ಶ್ರೀರಂಗಪಟ್ಟಣದಲ್ಲಿ ಸರಿಯಾದ ವರ್ತನೆ ತೋರಲಿಲ್ಲ ಎಂದಿದ್ದಾರೆ ಪೆನ್ಹಾಲುರಿಕ್. ಬಹುಶಃ ಉಳಿದ ಶಿಖರಾಲಂಕಾರಗಳು ಭಾರತದಲ್ಲಿ ಇದ್ದಿರಲೂಬಹುದು ಎಂದಿದ್ದಾರಲ್ಲದೆ, ಇದು ಕೂಡ ಭಾರತಕ್ಕೇ ಮರಳಿಹೋಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತನ್ನ ಶಕ್ತಿ ಮತ್ತು ಸಾಮ್ರಾಜ್ಯದ ಲಾಂಛನವಾಗಿ ಹುಲಿಯನ್ನೇ ಆಯ್ದುಕೊಂಡಿದ್ದ ಟಿಪ್ಪು ಸುಲ್ತಾನ್, ಈಸ್ಟ್ ಇಂಡಿಯಾ ಕಂಪನಿ ಅತ್ಯಂತ ಹೆಚ್ಚು ಹೆದರುತ್ತಿದ್ದ ವ್ಯಕ್ತಿ. ಇದೇ ಟಿಪ್ಪು ಘೋಷಿಸಿದ್ದ 'ಜೀವಮಾನಪೂರ್ತಿ ಕುರಿಯಾಗಿರುವುದಕ್ಕಿಂತ ಒಂದು ದಿನ ಹುಲಿಯಾಗಿ ಬಾಳಲು ಇಚ್ಛಿಸುತ್ತೇನೆ' ಎಂಬ ವಾಕ್ಯವಂತೂ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದು ಈಗ ಇತಿಹಾಸ. |