ಕಾಂಗ್ರೆಸ್ ಪಕ್ಷಕ್ಕೆ ಹೊಸತೊಂದು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದ ಜೆಎಂಎಂ ಇದೀಗ ಮೈತ್ರಿ ಮುರಿಯುವ ಮಾತನಾಡಿದ್ದಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 14 ಸ್ಥಾನಕ್ಕೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ.
ಶುಕ್ರವಾರ ತಡರಾತ್ರಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆ ಇದಾಗಿದ್ದು, ಜೆಎಂಎಂ ಮುಖಂಡ ದುರ್ಗಾ ಸೊರೇನ್, ''ಕಾಂಗ್ರೆಸ್ ನಮಗೆ ವಿಶ್ವಾಸದ್ರೋಹವೆಸಗಿದೆ'' ಎಂದು ಆರೋಪಿಸಿದ್ದಾರೆ.
ಕೇವಲ ಎರಡೇ ದಿನಗಳ ಹಿಂದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಎಂಎಂ ಹಾಗೂ ಕಾಂಗ್ರೆಸ್ 14 ಕ್ಷೇತ್ರಗಳನ್ನು ಹಂಚಿಕೊಂಡಿದ್ದು, ಕಾಂಗ್ರೆಸ್ ಏಳು ಸ್ಥಾನಗಳಿಂದಲೂ, ಜೆಎಂಎಂ ಐದು ಸ್ಥಾನಗಳಿಂದಲೂ ಸ್ಪರ್ಧಿಸುವುದಾಗಿ ಘೋಷಿಸಿಕೊಂಡದ್ದವು. ಜತೆಗೆ ಉಳಿದ ಎರಡು ಸ್ಥಾನಗಳನ್ನು ಆರ್‌ಜೆಡಿಗೆ ಬಿಟ್ಟುಕೊಟ್ಟಿದ್ದವು. ಆದರೆ ಇದೀಗ ಜೆಎಂಎಂ ರಾಗ ಬದಲಿಸಿದೆ.
ಶನಿವಾರ ಮುಂಜಾವಿನಲ್ಲಿ ಆರ್‌ಜೆಡಿ ಮುಖಂಡರ ನಿಯೋಗವೊಂದು ಪಕ್ಷದ ನಾಯಕ ಲಾಲು ಪ್ರಸಾದ್‌ರನ್ನು ಭೇಟಿಯಾಗಿದ್ದು, ಕಾಂಗ್ರೆಸ್- ಜೆಎಂಎಂ ಒಪ್ಪಂದದಲ್ಲಿ, ಆರ್‌ಜೆಡಿಗೆ ಐದು ಸ್ಥಾನಗಳಲ್ಲಾದರೂ ಸ್ಪರ್ಧಿಸಲು ಅವಕಾಶ ಒದಗಿಸಬೇಕು ಎಂದು ಮನವಿ ಸಲ್ಲಿಸಿತ್ತು. ಹೀಗಾಗಿ ಆರ್‌ಜೆಡಿ ಕನಿಷ್ಟ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಒಟ್ಟು 14 ಸ್ಥಾನಗಳ ಪೈಕಿ ಕನಿಷ್ಟ ಆರು ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿವೆ. ಆರ್‌ಜೆಡಿ ರಾಜ್ಯಾಧ್ಯಕ್ಷ ಗೌತಮ್ ಸಾಗರ್ ರಾಣಾ ನಡೆಸಿದ ಸುದ್ದಿಗೋಷ್ಠಿಯಲ್ಲಿ, ನಾಯಕ ಲಾಲು ಪ್ರಸಾದ್ ನಿರ್ದೇಶನದಂತೆ ಆರ್‌ಜೆಡಿ ಜಾರ್ಖಂಡ್‌ನಲ್ಲಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಸ್ಪಷ್ಟೀಕರಿಸಿದ್ದಾರೆ.
ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಈಗ ಕನಿಷ್ಟ 30 ಕ್ಷೇತ್ರಗಳಿಂದಾದರೂ ಸ್ಪರ್ಧಿಸಬೇಕೆಂಬ ತೀರ್ಮಾನ ಕೈಗೊಂಡಿದ್ದು, ಉಳಿದ ಮೂರು ಕ್ಷೇತ್ರಗಳನ್ನು ಕೈಬಿಡಲಿದೆ. ಆ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಲಾಲು ಪ್ರಸಾದ್ ಯಾದವ್ ಹಾಗೂ ಹಜೀಪುರ ಕ್ಷೇತ್ರದಲ್ಲಿ ರಾಮ್ ವಿಲಾಸ್ ಪಾಸ್ವಾನ್ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದೇ ಸಂದರ್ಭ ಈ ಎರಡು ಪಕ್ಷಗಳೂ ಅಲ್ಲಿ ಕಾಂಗ್ರೆಸ್‌ಗೆ ತಲಾ ಮೂರು ಕ್ಷೇತ್ರಗಳನ್ನು ಒಪ್ಪಂದದಲ್ಲಿ ಬಿಟ್ಟುಕೊಟ್ಟಿವೆ. |