ಆರೋಗ್ಯ ಕಾರಣಗಳನ್ನು ಮುಂದೊಡ್ಡಿ ಕೆ.ಎಸ್.ಸುದರ್ಶನ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ನಿಂದ ನಿವೃತ್ತಿ ಘೋಷಿಸಿದ್ದು, ಅದರ ಹೊಸ ಮುಖ್ಯಸ್ಥ (ಸರ ಸಂಘ ಚಾಲಕ)ರಾಗಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ ಅವರ ಅಭಿಮಾನಿ ಎಂದೇ ಗುರುತಿಸಿಕೊಂಡ ಮೋಹನ್ ರಾವ್ ಭಾಗ್ವತ್ ಅವರನ್ನು ಶನಿವಾರ ನೇಮಿಸಲಾಗಿದೆ.
ಸುಮಾರು ಒಂಬತ್ತು ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದ ಸುದರ್ಶನ್ ಅವರು, ಇದುವರೆಗೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಭಾಗ್ವತ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೆಸ್ಸೆಸ್ ಮೂಲಗಳು ತಿಳಿಸಿವೆ.
ವಾಸ್ತವವಾಗಿ, ದೇಶ ವಿಭಜನೆಯಾದಾಗ ಗುಜರಾತಿಗೆ ಬಂದ ಆಡ್ವಾಣಿಯವರು ಸಂಘದ ಪ್ರಚಾರಕಾರಿ ಕಾರ್ಯ ನಿರ್ವಹಿಸುತ್ತಿದ್ದಾಗ, ಮೋಹನ್ ಭಾಗ್ವತ್‌ರ ತಂದೆಯ ಶಿಷ್ಯರಾಗಿದ್ದರು.
ಭಾಗ್ವತ್ ಅವರು ಆಡ್ವಾಣಿಯ ಬೆಂಬಲಿಗರಾಗಿರುವುದರಿಂದ, ಆರೆಸ್ಸೆಸ್ ಮೇಲೆ ಆಡ್ವಾಣಿಯ ಹಿಡಿತವೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಬಿಜೆಪಿಗೆ ಆರೆಸ್ಸೆಸ್‌ನ ಪೂರ್ಣ ಬೆಂಬಲ ದೊರೆಯುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿದೆ.
ನಾಗ್ಪುರದ ರೇಶಿಮ್‌ಬಾಗ್ ಸ್ಮೃತಿ ಮಂದಿರದಲ್ಲಿ ನಡೆಯುತ್ತಿರುವ ಆರೆಸ್ಸೆಸ್‌ನ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಮಾವೇಶದ ಎರಡನೇ ದಿನವಾದ ಶನಿವಾರ ಈ ಅಧಿಕಾರ ಬದಲಾವಣೆ ನಡೆದಿದೆ.
ಆದರೆ, ಭಾಗ್ವತ್ ಅವರಿಂದ ತೆರವಾಗಿರುವ 'ಸಹ ಕಾರ್ಯವಾಹ' (ಪ್ರಧಾನ ಕಾರ್ಯದರ್ಶಿ) ಸ್ಥಾನಕ್ಕೆ ಹಿರಿಯ ಮುಂದಾಳು ಸುರೇಶ್ ಸೋನಿ ಅವರು ನೇಮಕವಾಗುವ ಸಾಧ್ಯತೆಗಳಿದ್ದು, ಸೋನಿ ಅವರು ರಾಜನಾಥ್ ಸಿಂಗ್ ಬೆಂಬಲಿಗ ಮತ್ತು ಸುದರ್ಶನ್ ಅವರಂತೆಯೇ ಆಡ್ವಾಣಿ ಬಗ್ಗೆ ಅಷ್ಟು ಒಳ್ಳೆಯ ಅಭಿಪ್ರಾಯ ಇಲ್ಲದವರು.
ಬಿಜೆಪಿಯಲ್ಲಿ ಈಗ ನಡೆಯುತ್ತಿರುವ ಅರುಣ್ ಜೇಟ್ಲಿ ಬಿಕ್ಕಟ್ಟಿನಲ್ಲಿಯೂ ಇದರ ಪ್ರಭಾವವಿದೆ ಎನ್ನಲಾಗುತ್ತಿದೆ. ಅಂದರೆ, ರಾಜನಾಥ್ ಸಿಂಗ್ ಮಿತ್ರ ಸುಧಾಂಶು ಮಿತ್ತಲ್ ಹಾಗೂ ಅರುಣ್ ಜೇಟ್ಲಿ ನಡುವಿನ ಘರ್ಷಣೆಯಲ್ಲಿ ಸೋನಿ ಅವರು ರಾಜನಾಥ್‌ಗೆ ಬೆಂಬಲಿಸುತ್ತಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. |