ಯುಪಿಎ ಮೈತ್ರಿಕೂಟದ ಆಪ್ತ ಲಾಲುಪ್ರಸಾದ್ ಯಾದವ್ ಅವರು ಬಿಹಾರದಲ್ಲಿ ಲೋಕಜನ ಶಕ್ತಿ ಪಕ್ಷದೊಂದಿಗೆ ಕೈಜೋಡಿಸಿ ತಮ್ಮೊಳಗೆ ಅಧಿಕ ಸೀಟು ಹಂಚಿಕೆ ಮಾಡಿಕೊಂಡು ಕಾಂಗ್ರೆಸ್ ಅಸಮಾಧನಕ್ಕೆ ಕಾರಣವಾಗಿರುವ ಪರಿಣಾಮ, ಮುಂಬರುವ ಚುನಾವಣೆಯಲ್ಲಿ ಬಿಹಾರದ 40ಕ್ಷೇತ್ರಗಳಲ್ಲಿ 37ರಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ.
ಬಿಹಾರದಲ್ಲಿ ನಾವು 37 ಲೋಕಸಭಾ ಕ್ಷೇತ್ರಗಳಲ್ಲೂ ಸ್ಪರ್ಧೆಗಿಳಿಯಲಿದ್ದೇವೆ. ಮೂರು ಸೀಟುಗಳನ್ನು ಮಾತ್ರ ಬಿಟ್ಟಿದ್ದು, ಅದರಲ್ಲಿ ಎರಡು ಕ್ಷೇತ್ರದಲ್ಲಿ ಲಾಲೂ ಪ್ರಸಾದ್ ಯಾದವ್, ಒಂದು ಕ್ಷೇತ್ರದಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರು ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸುಶೀಲ್ ಕುಮಾರ್ ಶಿಂಧೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಯುಪಿಎ ಬಿಹಾರದಲ್ಲಿ ತನ್ನ ಮೈತ್ರಿಯನ್ನು ಕಡಿದುಕೊಂಡಂತಾಗಿದೆ. ನಾವು ರಾಷ್ಟ್ರೀಯ ಜನತಾದಳದ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
37ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗಿದ್ದು, ಅನುಮತಿಗೆ ಕಾಯಲಾಗುತ್ತಿದೆ ಎಂದು ಶಿಂಧೆ ತಿಳಿಸಿದರು.
ಇತ್ತೀಚೆಗೆ ಬಿಹಾರ 40ಲೋಕಸಭಾ ಕ್ಷೇತ್ರಗಳ ಸೀಟು ಹಂಚಿಕೆಯ ಸಂದರ್ಭದಲ್ಲಿ ಆರ್‌ಜೆಡಿಯ ಲಾಲು ಪ್ರಸಾದ್ ಯಾದವ್ ಅವರು ಲೋಕಜನಶಕ್ತಿ ಪಕ್ಷದ ರಾಮ್ ವಿಲಾಸ್ ಪಾಸ್ವಾನ್ ಅವರೊಂದಿಗೆ ಕೈಜೋಡಿಸುವ ಮೂಲಕ, 25ಕ್ಷೇತ್ರಗಳಲ್ಲಿ ಆರ್‌ಜೆಡಿ, 12ಕ್ಷೇತ್ರಕ್ಕೆ ಲೋಕಜನ ಶಕ್ತಿ ಹಾಗೂ ಕಾಂಗ್ರೆಸ್‌ಗೆ 3 ಸೀಟುಗಳನ್ನು ನೀಡಿತ್ತು. 40 ಸೀಟುಗಳಲ್ಲಿ ಕೇವಲ 3ಸೀಟುಗಳನ್ನು ನೀಡಿರುವುದಕ್ಕೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಇದೀಗ ಬಿಹಾರದಲ್ಲಿ 37ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದೆ. |