ಆರ್‌ಜೆಡಿ ಮತ್ತು ಎಲ್‌ಜೆಪಿ ಪಕ್ಷಗಳು ಬಿಹಾರದ ಎಲ್ಲಾ 40 ಸ್ಥಾನಗಳಿಗೂ ಸ್ಫರ್ಧಿಸಿಸಲು ನಿರ್ಧರಿಸಿದ್ದು, ಕಾಂಗ್ರೆಸ್‌ಗೆ ಉಳಿಸಿದ್ದ ಮೂರು ಸ್ಥಾನಗಳಲ್ಲಿ ಸಹ ತನ್ನ ಅಭ್ಯರ್ಥಿಗಳನ್ನು ಇಳಿಸಲು ಬಯಸಿವೆ. ಆರ್‌ಜೆಡಿ-ಎಲ್‌ಜೆಪಿ ನಿರ್ಧಾರವನ್ನು ಕಡೆಗಣಿಸಿ ಕಾಂಗ್ರೆಸ್ 37 ಸ್ಥಾನಗಳಲ್ಲಿ ಸ್ಫರ್ಧಿಸಲು ನಿರ್ಧರಿಸಿರುವುದಕ್ಕೆ ಪ್ರತಿಯಾಗಿ ಈ ಪಕ್ಷಗಳು ಎಲ್ಲಾ ಸ್ಥಾನಗಳಲ್ಲೂ ಸ್ಫರ್ಧಿಸಲು ನಿರ್ಧರಿಸಿವೆ.
ಸಸಾರಮ್, ಔರಂಗಾಬಾದ್ ಮತ್ತು ಮಧುಬನಿ ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಉಳಿಸಲಾಗಿತ್ತು. ಈ ಮೂರು ಸ್ಥಾನಗಳಿಗೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಇಳಿಸುವುದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ಅಲ್ಲದೆ, ಜಾರ್ಖಂಡ್‌ನಲ್ಲೂ ಸಹ ಈ ಎರಡು ಪಕ್ಷಗಳು ಜಂಟಿಯಾಗಿ ಸ್ಫರ್ಧಿಸಲು ನಿರ್ಧರಿಸಿವೆ. ಬಿಹಾರದಲ್ಲಿ ಎಪ್ರಿಲ್ 16, 23, 30 ಹಾಗೂ ಮೇ7 ಹೀಗೆ ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ.
ತೃತೀಯ ರಂಗ ಸೇರೆ, ಯುಪಿಎ ಬಿಡೆ: ಲಾಲೂ ಈ ಮಧ್ಯೆ ಯಾವುದೇ ಕಾರಣಕ್ಕೂ ತೃತೀಯ ರಂಗ ಸೇರುವುದಿಲ್ಲ ಎಂದು ಲಾಲೂ ಸ್ಪಷ್ಟಪಡಿಸಿದ್ದಾರೆ. ಯುಪಿಎಯ ಅವಿಭಾಜ್ಯ ಅಂಗವಾಗಿಯೇ ಇರುವುದಾಗಿ ಹೇಳಿರುವ ಅವರು, "ಚುನಾವಣಾ ನಂತರನಾವು ಸರ್ಕಾರ ರೂಪಿಸುತ್ತೇವೆ" ಎಂದು ನುಡಿದರು.
ಮನಮೋಹನ್ ಸಿಂಗ್ ಅವರೇ ಮುಂದಿನ ಪ್ರಧಾನಿ ಎಂದು ನುಡಿದ ಲಾಲೂ ಯುಪಿಎಗೆ ಬದ್ಧವಾಗಿರುವುದಾಗಿ ಪುನರುಚ್ಚರಿಸಿದರು.
|