ಪಬ್ ದಾಳಿ, ಪ್ರೇಮಿಗಳ ದಿನಾಚರಣೆಗೆ ಅಡ್ಡಿ ಮಾಡುವ ಮೂಲಕ ತೀವ್ರ ವಿವಾದಕ್ಕೆ ಒಳಗಾಗಿದ್ದ ಶ್ರೀರಾಮಸೇನೆ ಸಂಘಟನೆಗೆ ಗೋವಾದಲ್ಲೂ ನಿಷೇಧ ಹೇರಿರುವುದಾಗಿ ಗೋವಾ ಸರ್ಕಾರ ಶನಿವಾರ ತಿಳಿಸಿದೆ.
ಶ್ರೀರಾಮಸೇನೆ ಸಂಘಟನೆ ನಿಷೇಧದ ಕಡತಕ್ಕೆ ನಾನು ವೈಯಕ್ತಿಕವಾಗಿ ಸಹಿ ಹಾಕಿದ್ದೇನೆ. ರಾಜ್ಯದಲ್ಲಿನ ಶಾಂತಿ-ಸೌರ್ದತೆಯನ್ನು ಕದಡುವ ಇಂತಹ ಸಂಘಟನೆಯ ಅಗತ್ಯ ರಾಜ್ಯಕ್ಕಿಲ್ಲ ಎಂದು ಗೃಹಸಚಿವ ರವಿ ನಾಯಕ್ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಸಾಮಾಜಿಕ ಸ್ವಾಸ್ಥವನ್ನು ಹಾಳುಗೆಡವುವ ಶ್ರೀರಾಮಸೇನೆಯಂತಹ ಸಂಘಟನೆ ತಳವೂರವು ರಾಜ್ಯದಲ್ಲಿ ಅವಕಾಶ ಇಲ್ಲ, ಆ ಕಾರಣಕ್ಕಾಗಿಯೇ ಪ್ರಮೋದ್ ಮುತಾಲಿಕ್ ನೇತೃತ್ವದ ಸಂಘಟನೆಗೆ ನಿಷೇಧ ಹೇರಲಾಗಿದೆ ಎಂದು ವಿವರಣೆ ನೀಡಿದರು.
ಮಂಗಳೂರಿನ ಪಬ್ ಮೇಲೆ ಶ್ರೀರಾಮಸೇನೆ ದಾಳಿ ನಡೆಸುವ ಮೂಲಕ ರಾಷ್ಟ್ರದಾದ್ಯಂತ ತೀವ್ರ ವಿವಾದ-ಟೀಕೆಗೊಳಗಾಗಿತ್ತು. ಬಳಿಕ ಪಬ್ ಸಂಸ್ಕೃತಿಯ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಪ್ರಮೋದ್ ಮುತಾಲಿಕ್ ತಿಳಿಸಿದ್ದರು.
ಗೋವಾದಲ್ಲೂ ಕೂಡ ಶ್ರೀರಾಮಸೇನೆ ಘಟಕವನ್ನು ಆರಂಭಿಸುವುದಾಗಿ ಪ್ರಮೋದ್ ಮುತಾಲಿಕ್ ಇತ್ತೀಚೆಗಷ್ಟೇ ಘೋಷಿಸಿದ್ದರು. ಈ ಹೇಳಿಕೆಯ ಬೆನ್ನಲ್ಲೇ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಶ್ರೀರಾಮಸೇನೆ ತಳವೂರಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಸಚಿವ ರವಿ ನಾಯಕ್ ಹೇಳಿದ್ದರು. |