ಎಪ್ರಿಲ್ 16ರಂದು ನಡೆಯಲಿರುವ ಪ್ರಥಮ ಹಂತದ ಲೋಕಸಭಾ ಚುನಾವಣಾ ಅಧಿಸೂಚನೆಯನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸೋಮವಾರ ಬಿಡುಗಡೆಗೊಳಿಸಿದ್ದಾರೆ.ಮೊದಲ ಹಂತದಲ್ಲಿ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 124 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದೇ ವೇಳೆ ಆಂಧ್ರ ಪ್ರದೇಶದ 154(294) ಸ್ಥಾನಗಳು, ಹಾಗೂ ಒರಿಸ್ಸಾದ 70(147) ವಿಧಾನಸಭಾ ಸ್ಥಾನಗಳಿಗೂ ಎಪ್ರಿಲ್ 16ರಂದು ಚುನಾವಣೆ ನಡೆಯಲಿದ್ದು ಈ ರಾಜ್ಯಗಳ ರಾಜ್ಯಪಾಲರೂ ಅಧಿಸೂಚನೆ ಹೊರಡಿಸಿದ್ದಾರೆ.ಅಧಿಸೂಚನೆ ಹೊರಡಿಸುವುದರಿಂದ ಚುನಾವಣಾ ಪ್ರಕ್ರಿಯೆಯು ಅಧಿಕೃತವಾಗಿ ಆರಂಭಗೊಳ್ಳಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮುಂದಾಗಲಿದ್ದಾರೆ. ಲೋಕ ಸಭೆಯ 543 ಸ್ಥಾನಗಳಿಗೆ ಎಪ್ರಿಲ್ 16, 23, 30 ಮತ್ತು ಮೇ 7, 13ರಂದು ಐದು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 16ರಂದು ಮತಎಣಿಕೆ ನಡೆಯಲಿದೆ. ರಾಷ್ಟ್ರದಲ್ಲಿ 71.4 ಕೋಟಿ ಮಂದಿ ಮತದಾನದ ಹಕ್ಕನ್ನು ಹೊಂದಿದ್ದಾರೆ.ಪ್ರಥಮ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಸಲು ಮಾರ್ಚ್ 30 ಕೊನೆಯದಿನವಾಗಿದ್ದು, ಎಪ್ರಿಲ್ 2 ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿದೆ. ಎರಡನೇ ಹಂತದ ಚುನಾವಣೆಗೆ ಮಾರ್ಚ್ 28, ಮೂರನೆ ಹಂತದ ಚುನಾವಣೆಗೆ ಎಪ್ರಿಲ್ 2, ನಾಲ್ಕನೆ ಹಂತಕ್ಕೆ ಎಪ್ರಿಲ್ 11 ಮತ್ತು ಐದನೆ ಹಂತಕ್ಕೆ ಎಪ್ರಿಲ್ 17ರಂದು ಅಧಿಸೂಚನೆ ಹೊರಡಿಸಲಾಗುವುದು.ಸುಮಾರು 2,500 ವೀಕ್ಷಕರು ಮತದಾನವನ್ನು ನಿಕಟವಾಗಿ ಪರಿವೀಕ್ಷಣೆ ನಡೆಸಲಿದ್ದಾರೆ. 40 ಲಕ್ಷ ಸರಕಾರಿ ಉದ್ಯೋಗಿಗಳು ಮತ್ತು 21 ಲಕ್ಷ ಭದ್ರತಾ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಲಾಗುವುದು. |