ವರುಣ್ ಗಾಂಧಿ ಸ್ಪರ್ಧೆಯನ್ನು ತಡೆ ಹಿಡಿಯಿರಿ ಎಂಬ ಚುನಾವಣಾ ಆಯೋಗದ ಸೂಚನೆಗೆ ಬಿಜೆಪಿ ಕಿಡಿಕಾರಿದ್ದು, ನಟ ಸಂಜಯ್ ದತ್, ಜಗದೀಶ್ ಟೈಟ್ಲರ್ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದಾದರೆ, ವರುಣ್ ಗಾಂಧಿ ಸ್ಪರ್ಧೆ ಯಾಕೆ ಸಾಧ್ಯವಿಲ್ಲ ? ಎಂದು ಗಂಭೀರವಾಗಿ ಪ್ರಶ್ನಿಸಿದೆ.
ವರುಣ್ ಗಾಂಧಿ ಕುರಿತು ಆಯೋಗ ತಳೆದಿರುವ ನಿರ್ಧಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಚುನಾವಣಾ ಆಯೋಗ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಆಯೋಗದ ನವೀನ್ ಚಾವ್ಲಾ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಅವರೊಂದಿಗೆ ಆಪ್ತರಾಗಿದ್ದಾರೆಂಬುದು ತಮಗೆ ತಿಳಿದಿದೆ. ಆ ನೆಲೆಯಲ್ಲಿ ಕಾಂಗ್ರೆಸ್ ಕೈಗೊಂಬೆಯಂತೆ ಆಯೋಗ ವರ್ತಿಸುತ್ತಿದೆ ಎಂದು ಆಪಾದಿಸಿದರು.
ವರುಣ್ ಗಾಂಧಿಯನ್ನು ಪಿಲಿಭಿತ್ ಕ್ಷೇತ್ರದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಭಾರತೀಯ ಜನತಾ ಪಕ್ಷ, ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದೆ.
ಬಿಜೆಪಿಯ ಪಿಲಿಭಿತ್ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ತನ್ನ ಚುನಾವಣಾ ಪ್ರಚಾರದ ವೇಲೆ ದ್ವೇಷ ಭಾಷಣ ಮಾಡಿರುವುದು ನಿಜವೆಂದು ಕಂಡುಕೊಂಡಿರುವ ಚುನಾವಣಾ ಆಯೋಗವು, ಅವರನ್ನು ಚುನಾವಣಾ ಕಣಕ್ಕೆ ಇಳಿಸುವುದರ ವಿರುದ್ಧ ಪಕ್ಷಕ್ಕೆ ಎಚ್ಚರಿಕೆ ನೀಡಿತ್ತು.
ತನ್ನ ಭಾಷಣವನ್ನು ತಿರುಚಲಾಗಿದೆ ಎಂಬ ವರುಣ್ ಗಾಂಧಿ ಅವರ ಸಮರ್ಥನೆಯನ್ನು ತಳ್ಳಿ ಹಾಕಿರುವ ಆಯೋಗ ವರುಣ್ ಗಾಂಧಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಾಗಿ ತರಾಟೆಗೆ ತೆಗೆದುಕೊಂಡಿತ್ತು.
ಕಾನೂನು ವ್ಯಾಪ್ತಿಯಲ್ಲಿ ಕ್ರಮ: ವರುಣ್ ಗಾಂಧಿ ಸ್ಪರ್ಧೆ ನಿರ್ಬಂಧದ ಕುರಿತು ಬಿಜೆಪಿ ವಾಗ್ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗ, ಬಿಜೆಪಿ ಕೋರ್ಟ್ ಮೊರೆ ಹೊಕ್ಕರೆ ಅದನ್ನು ಎದುರಿಸಲು ಸಿದ್ದ ಎಂದು ತಿರುಗೇಟು ನೀಡಿದೆ. ವರುಣ್ ಪ್ರಕರಣದಲ್ಲಿ ಆಯೋಗ ಕಾನೂನು ವ್ಯಾಪ್ತಿ ಮೀರಿ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. |