ವರುಣ್ ಗಾಂಧಿಯ ದೊಡ್ಡಪ್ಪನ ಮಗಳಾಗಿರುವ ಪ್ರಿಯಾಂಕಾ ಗಾಂಧಿ ವರುಣ್ ಗಾಂಧಿಯ ದ್ವೇಷ ಭಾಷಣವನ್ನು ಖಂಡಿಸಿದ್ದು, ಅವರ ದ್ವೇಷ ಭಾಷಣವು ಗಾಂಧಿ ಕುಟುಂಬದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ." ವರುಣ್ ಗಾಂಧಿ ನೀಡಿರುವ ಹೇಳಿಕೆಯು ಖೇದಕರ. ಅವರು ಭಗವದ್ಗೀತೆಯನ್ನು ಓದಿ ಅದರ ಸಾರವನ್ನು ಸೂಕ್ತವಾಗಿ ಅರ್ಥಮಾಡಿಕೊಳ್ಳಲಿ" ಎಂದು ಸುದ್ದಿಗಾರ ಪ್ರಿಯಾಂಕ ಹೇಳಿದ್ದಾರೆ.ವರುಣ್ ಅವರು ಈ ವಿವಾದದಲ್ಲಿ ತನ್ನನ್ನು ಸಮರ್ಥಿಸಿಕೊಳ್ಳುವ ವೇಳೆ ತಾನು ಗಾಂಧಿ ಕುಟುಂಬದಿಂದ ಬಂದವನೆಂದು ಹೇಳಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ, "ವರುಣ್ ಕುಟುಂಬದ ಮೌಲ್ಯಗಳಿಗೆ ವಿರುದ್ಧವಾಗಿ ಸಾಗಿದ್ದಾರೆ" ಎಂದು ನುಡಿದರು.ಈ ಮಧ್ಯೆ ಪ್ರಿಯಾಂಕ ಗಾಂಧಿಯ ಹೇಳಿಕೆಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಅವರನ್ನು ಟೀಕಿಸಿದೆ. ವರುಣ್ ಗಾಂಧಿಯ ಅಭ್ಯರ್ಥಿತನವನ್ನು ಹಿಂತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಬಿಜೆಪಿಯು ವರುಣ್ ನಮ್ಮ 'ಗೌರವಾನ್ವಿತ ಅಭ್ಯರ್ಥಿ' ಎಂದು ಹೇಳಿದೆ. ಅಲ್ಲದೆ ಚುನಾವಣಾ ಆಯೋಗವು ಪಕ್ಷಪಾತಿತನ ತೋರುತ್ತಿದ್ದು, ಕಾಂಗ್ರೆಸ್ ಪರವಾಗಿದೆ ಎಂದು ದೂರಿದೆ.ನಟ ಸಂಜಯ್ ದತ್, ಜಗದೀಶ್ ಟೈಟ್ಲರ್ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದಾದರೆ, ವರುಣ್ ಗಾಂಧಿ ಸ್ಪರ್ಧೆ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿರುವ ಬಿಜೆಪಿಯು, ಚುನಾವಣಾ ಆಯುಕ್ತ ನವೀನ್ ಚಾವ್ಲಾ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿಗೆ ಆಪ್ತರಾಗಿದ್ದು ಕಾಂಗ್ರೆಸ್ ಕೈಗೊಂಬೆಯಂತೆ ಆಯೋಗ ವರ್ತಿಸುತ್ತಿದೆ ಎಂದು ಆಪಾದಿಸಿದೆ. |