ಟಿವಿ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಕೊಲೆ ಪ್ರಕರಣವನ್ನು ದೆಹಲಿ ಪೊಲೀಸರು ಬೇಧಿಸಿದ್ದಾರೆ. ಇನ್ನೋರ್ವ ಯುವತಿ ಐಟಿ ಎಕ್ಸಿಕ್ಯೂಟಿವ್ ಜಿಗಿಶ ಗೋಷ್ ಕೊಲೆ ಪ್ರಕರಣದ ಆರೋಪಿಗಳ ವಿಚಾರಣೆ ವೇಳೆಗೆ ಸೌಮ್ಯಾ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಜಗಿಶರನ್ನು ಉಸಿರುಗಟ್ಟಿಸಿ ಕೊಲ್ಲಲಾಗಿತ್ತು.
ಈ ಕೊಲೆ ಪ್ರಕರಣಗಳಲ್ಲಿ ನಾಲ್ವರು ಪಾಲ್ಗೊಂಡಿದ್ದಾರೆ ಎಂದು ತಿಳಿಸಿರುವ ಪೊಲೀಸ್ ಮೂಲಗಳು ಅವರಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತ ಆರೋಪಿಗಳು ಯುವತಿಯರಿಬ್ಬರ ಕೊಲೆಗೈದಿರುವುದನ್ನು ಒಪ್ಪಿಕೊಂಡಿದ್ದಾರೆ. "ರಸ್ತೆ ಜಗಳ, ಚುಡಾಯಿಸುವಿಕೆ ಅಥವಾ ಕಳ್ಳತನ ಕೊಲೆಗೆ ಕಾರಣವಾಗಿರಬಹುದು" ಎಂಬುದಾಗಿ ಜಂಟಿ ಪೊಲೀಸ್ ಆಯುಕ್ತ ಅಜಯ್ ಕಶ್ಯಪ್ ಹೇಳಿದ್ದಾರೆ.
ರವಿ, ಬಲ್ಜೀತ್, ಅಮಿತ್ ಹಾಗೂ ಅಜಯ್ ಎಂಬವರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಕೊಲೆಗೆ ಬಳಸಲಾಗಿರುವ ಆಯುಧ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ರವಿ ಕಪೂರ್ ಎಂಬಾತ ಈ ಕೊಲೆಗಳ ರೂವಾರಿಯಾಗಿದ್ದು, ಈತನೇ ಸೌಮ್ಯಾಳಿಗೆ ಗುಂಡೆಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ಹಲವಾರು ಪ್ರಕರಣಗಳು ದಾಖಲವಾಗಿವೆ.
ಬಂಧಿತರನ್ನು ಮಂಗಳವಾರ ಅಪರಾಹ್ನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಸುದ್ದಿವಾಹಿನಿಯೊಂದರಲ್ಲಿ ಪ್ರೊಡ್ಯೂಸರ್ ಆಗಿದ್ದ ಸೌಮ್ಯ ಮಧ್ಯರಾತ್ರಿ 3.30ರ ವೇಳೆಗೆ ಕಚೇರಿಯಿಂದ ತನ್ನ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಆಕೆಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಆಕೆಯ ಕಾರು ನೆಲ್ಸನ್ ಮಂಡೇಲ ರಸ್ತೆಯಲ್ಲಿ ರಸ್ತೆ ವಿಭಜಕದ ಮೇಲೆ ಏರಿತ್ತು. ಚಾಲಕನ ಸ್ಥಳದಲ್ಲಿ ಆಕೆಯ ಮೃತದೇಹ ಬಿದ್ದಿದ್ದು, ತಲೆಗೆ ಗುಂಡಿಟ್ಟು ಕೊಲ್ಲಲಾಗಿತ್ತು. ಕಾರಿನಲ್ಲಿ ಹೋರಾಡಿದ ಕುರುಹುಗಳು ಕಂಡುಬಂದಿದ್ದವು. ಒಂದು ಚಕ್ರವನ್ನು ಪಂಕ್ಚರ್ ಮಾಡಲಾಗಿದ್ದು, ಅದರಲ್ಲೂ ಗುಂಡು ಪತ್ತೆಯಾಗಿತ್ತು. |