ಉತ್ತರ ಪ್ರದೇಶದ ಮಣಿಪುರ ಜಿಲ್ಲೆಯ ಮಹಿಳಾ ಜಿಲ್ಲಾಧಿಕಾರಿಯೊಬ್ಬರಿಗೆ ಧಮ್ಕಿಹಾಕಿರುವ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ವಿಚಾರದಲ್ಲಿ ಮೆದು ನೀತಿ ತಳೆದಿರುವ ಚುನಾವಣಾ ಆಯೋಗ ದ್ವಂದ್ವ ನೀತಿ ತಾಳಿದೆ ಎಂಬುದಾಗಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಉತ್ತರ ಪ್ರದೇಶದ ಮಣಿಪುರ ಜಿಲ್ಲೆಯ ಅಧಿಕಾರಿಯೊಬ್ಬರ ವಿರುದ್ಧ ಹರಿಹಾಯ್ದಿರುವ ಮುಲಾಯಂ "ನೀನು ಮಹಿಳೆಯಾಗಿರುವುದಕ್ಕೆ ಬಿಡುತ್ತೇನೆ. ಗಂಡಸಾಗಿರುತ್ತಿದ್ದರೆ ಕಥೆಯೇ ಬೇರೆ ಇರುತ್ತಿತ್ತು" ಎಂದು ಬೆದರಿಕೆ ಹಾಕಿದ್ದಾರೆ ಮತ್ತು ಒಂದು ವಾರದೊಳಗಾಗಿ ತನ್ನ ನಡವಳಿಕೆಯನ್ನು ತಿದ್ದಿಕೊಳ್ಳದಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆಂದು ದೂರಲಾಗಿದೆ.
ಜಿಲ್ಲಾಧಿಕಾರಿಗೆ ಮುಲಾಯಂ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಪ್ರಕಾಶ್ ಜಾವಡೆಕರ್ ಅವರು ಚುನಾವಣಾ ಆಯೋಗವು ಈ ಕುರಿತು ಕ್ರಮಕೈಗೊಳ್ಳಬೇಕು ಮತ್ತು ದ್ವಂದ್ವ ನೀತಿ ಅನುಸರಿಸಬಾರದು ಎಂಬುದಾಗಿ ಹೇಳಿದ್ದಾರೆ. ಅಲ್ಲದೆ ವರುಣ್ ಗಾಂಧಿ ಪ್ರಕರಣದಲ್ಲಿ ಅತ್ಯಾಸಕ್ತಿಯಿಂದ ವರ್ತಿಸಿರುವ ಆಯೋಗವು ಮುಲಾಯಂ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
"ಆಯೋಗವು ಸ್ವಯಂ ಆಗಿ ಕ್ರಮಕೈಗೊಳ್ಳುವ ಬದ್ಧತೆ ಹೊಂದಿದೆ. ಮುಲಾಯಂ ಜಿಲ್ಲಾ ದಂಡಾಧಿಕಾರಿಗೆ ಬೆದರಿಕೆ ಹಾಕಿರುವುದು ಮಾತ್ರವಲ್ಲ, ಆಕೆ ಓರ್ವ ಮಹಿಳೆ ಎಂಬ ಅವಹೇಳನವನ್ನೂ ಮಾಡಿದ್ದಾರೆ. ಇದು ಸರ್ಕಾರಕ್ಕೆ ಬೆದರಿಕೆಯೊಡ್ಡಿರುವುದು ಮಾತ್ರವಲ್ಲ, ಚುನಾವಣಾ ಯಂತ್ರಕ್ಕೂ ಬೆದರಿಕೆ ಹಾಕಿದಂತೆ" ಎಂದು ಜಾವಡೆಕರ್ ವಿಶ್ಲೇಷಿಸಿದ್ದಾರೆ.
ಜಿಲ್ಲಾಧಿಕಾರಿಯಾಗಿರುವ ಅವರು ಬಂಧೂಕು ಪರವಾನಗಿ ರದ್ದುಪಡಿಸುವ ಮೂಲಕ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ದೂರಿದ್ದಾರೆ. ಜಿಲ್ಲಾಧಿಕಾರಿ ಪಕ್ಷಪಾತಿತನ ತೋರುತ್ತಿದ್ದು, ತಮ್ಮ ಶಸ್ತ್ರಾಸ್ತ್ರ ಪರವಾನಗಿಯನ್ನು ಮುಟ್ಟುಗೋಲು ಹಾಕಿದ್ದಾರೆ ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತರು ದೂರಿದ್ದಾರೆ. ಇದು ಮುಲಾಯಂ ಕೋಪಕ್ಕೆ ಕಾರಣ.
"ಜಿಲ್ಲಾಧಿಕಾರಿಯ ಈ ಕ್ರಮವು ನನ್ನ ಚುನಾವಣೆಯ ಮೇಲೆ ಪರಿಣಾಮ ಬೀರುತ್ತಿದ್ದು, ಇದು ಸಹಿಸಲಸಾಧ್ಯ. ಅಪರಾಧಿಗಳು ಮತ್ತು ಜನಸಾಮಾನ್ಯರನ್ನು ಗುರುತಿಸುವ ವಿವೇಚನೆಯನ್ನು ಆಕೆ ಕಳೆದುಕೊಂಡಿದ್ದಾರೆ. ಆಕೆಯ ತಲೆಯನ್ನು ಪರೀಕ್ಷೆ ಮಾಡಬೇಕು" ಎಂಬುದಾಗಿ ಚುನಾವಣಾ ಸಭೆಯೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆಂದು ವರದಿಯಾಗಿದೆ. |