ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನನಗೆ ಪ್ರಧಾನಿಯಾಗುವ ಇಚ್ಛೆ ಇಲ್ಲ: ಸೋನಿಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನನಗೆ ಪ್ರಧಾನಿಯಾಗುವ ಇಚ್ಛೆ ಇಲ್ಲ: ಸೋನಿಯಾ
ದಾವಣಗೆರೆಯಲ್ಲಿ ಸೋಮವಾರ ಭಾರತ್ ನಿರ್ಮಾಣ ರ‌್ಯಾಲಿಯ ಮೂಲಕ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿರುವ ಕಾಂಗ್ರೆಸ್ ಪಕ್ಷದ ವರಿಷ್ಠೆ ಸೋನಿಯಾಗಾಂಧಿ ಅವರು ಮಂಗಳವಾರ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ರಾಷ್ಟ್ರದೆಲ್ಲೆಡೆ ಅಸ್ತಿತ್ವದಲ್ಲಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಬಣ್ಣಿಸಿರುವ ಪ್ರಣಾಳಿಕೆಯು ಕಾಂಗ್ರೆಸ್ ಮಾತ್ರ ಸಮಾಜದ ಎಲ್ಲರಿಗೂ ಭದ್ರತೆ ಒದಗಿಸಲು ಸಾಧ್ಯ ಎಂದು ಹೇಳಿದೆ. ಎಲ್ಲಾ ಪ್ರಜೆಗಳಿಗೂ ಭದ್ರತೆ, ಗೌರವ ಮತ್ತು ಅಭ್ಯುದಯವು ನಮ್ಮ ಪ್ರಮುಖ ಕಾರ್ಯ ಎಂಬುದಾಗಿ ಸೋನಿಯಾ ಗಾಂಧಿ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ನುಡಿದರು.

ಪ್ರಣಾಳಿಕೆ ಬಿಡುಗಡೆ ವೇಳೆ ಪ್ರಧಾನಿ ಮನಮೋಹನ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ, ವೀರಪ್ಪ ಮೊಯ್ಲಿ ಹಾಗೂ ಮತ್ತಿತರ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸೋನಿಯಾ ಅವರು ಮನಮೋಹನ್ ಸಿಂಗ್ ಅವರನ್ನು ಮುಂದಿನ ಪ್ರಧಾನಿ ಎಂಬುದಾಗಿ ಬಿಂಬಿಸಿದ್ದಾರೆ. "ಪ್ರಧಾನಿ ಸ್ಥಾನಕ್ಕೆ ಹಲವು ಅಭ್ಯರ್ಥಿಗಳಿರಬಹುದು. ಆದರೆ, ಯಾರೂ ಮನಮೋಹನ್ ಸಿಂಗ್ ಅವರಿಗೆ ಸರಿಸಮವಲ್ಲ. ಅವರಲ್ಲಿ ಅನುಭವ ಮತ್ತು ದಕ್ಷತೆ ಇದೆ" ಎಂಬುದಾಗಿ ಸೋನಿಯಾ ಮನಮೋಹನರನ್ನು ಹಾಡಿ ಹೊಗಳಿದರು.

ಕಳೆದ ಐದು ವರ್ಷಗಳಲ್ಲಿ ಯುಪಿಎ ಮಾಡಿರುವ ಸಾಧನೆಯನ್ನು ಕಂಡು ಜನರು ಕಾಂಗ್ರೆಸ್ ಪರ ಮತ ಚಲಾಯಿಸಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಇದೇ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ತನಗೆ ಪ್ರಧಾನಿಯಾಗುವ ಇಚ್ಛೆ ಇಲ್ಲ ಎಂದು ಹೇಳಿದರು. ನನ್ನ ಮನಸ್ಸು ಬದಲಾಗುವ ಸಂಭವವೇ ಇಲ್ಲ. ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಮನಮೋಹನ್ ಸಿಂಗ್. ಇದಕ್ಕೆ ಹೆಚ್ಚು ನಾನೇನು ಹೇಳಲಿ ಎಂದು ನುಡಿದರು.

ಈ ಸಂದರ್ಭದಲ್ಲಿ ಮಾತನಾಡಿದ, ಪ್ರಧಾನಿ ಮನಮೋಹನ್ ಸಿಂಗ್ ಅವರು ಸರ್ಕಾರ ಸಾಧಿಸಿರುವ ಪ್ರಗತಿ ಹಾಗೂ ಸಾಧನೆಗಳನ್ನು ಪ್ರಸ್ತಾಪಿಸಿದರು. ಅವರು ಈ ಸಂದರ್ಭದಲ್ಲಿ ಅಣುಒಪ್ಪಂದ ಗುರಿ ತಲುಪಿರುವುದಕ್ಕೆ ಹರ್ಷವ್ಯಕ್ತಪಡಿಸಿದರು. ಅಲ್ಲದೆ, ವಿಶ್ವದಲ್ಲಿ ಭಾರತವು ಪ್ರಗತಿಯಲ್ಲಿ ಚೀನಾದ ಬಳಿಕ ಸ್ಥಾನದಲ್ಲಿದೆ ಎಂದು ಅವರು ನುಡಿದರು. ಬಿಜೆಪಿ ಹಾಗೂ ಸಿಪಿಎಂ ಋಣಾತ್ಮಕ ಮನೋಭಾವ ಹೊಂದಿದೆ ಎಂದು ನುಡಿದ ಸಿಂಗ್, ವರುಣ್ ಗಾಂಧಿ ಭಾಷಣವು ಬಿಜೆಪಿಯ ಸಂಕೇತವಾಗಿದೆ ಎಂದು ಆರೋಪಿಸಿದರಲ್ಲದೆ, ವರುಣ್ ಗಾಂಧಿಯನ್ನು ಬಿಜೆಪಿ ಬೆಂಬಲಿಸಲು ಬಿಜೆಪಿ ಮುಂದಾಗಿರುವುದಕ್ಕೆ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ಕೋಮುಭಾವನೆಯಿಂದ ಬಿಜೆಪಿಯು ರಾಷ್ಟ್ರವನ್ನು ಒಡೆಯುತ್ತಿದೆ ಎಂದು ದೂರಿದರು.

ಪ್ರಣಾಳಿಕೆಯಲ್ಲಿ ನೀಡಿರುವ ಕೆಲವು ಪ್ರಮುಖ ಭರವಸೆಗಳು ಇಂತಿವೆ. ಉದ್ಯೋಗ ಖಾತರಿ ಯೋಜನೆಯಡಿ ದಿನ ಒಂದರ ನೂರು ರೂಪಾಯಿ ನೀಡಲಾಗುವುದು. ಭಯೋತ್ಪಾದನೆ ನಿಗ್ರಹ ಹಾಗೂ ಆರ್ಥಿಕ ಹಿಂಸರಿತ ತಡೆಗೆ ಆದ್ಯತೆ. 2004ರಲ್ಲಿ ನೀಡಿದ್ದ ಅಷ್ಟೂ ಭರವಸೆಗಳ ಈಡೇರಿಕೆ. ಪೊಲೀಸ್ ಬಲವರ್ಧನೆಗೆ ವಿಶೇಷ ಕ್ರಮ. ರಾಷ್ಟ್ರೀಯ ಆಹಾರ ಭದ್ರತೆಗೆ ಕಾಯ್ದೆ ಜಾರಿ. ರೈತ ಕುಟುಂಬಗಳಿಗೆ ವಿಶೇಷ ಯೋಜನೆ. ಗ್ರಾಮ ಪಂಚಾಯತ್‌ಗಳ ಬಲವರ್ಧನಗೆ ಕ್ರಮ. ಸಾಮಾನ್ಯ ನಾಗರಿಕ ಕಾರ್ಯಕ್ರಮಗಳ ಮುಂದುವರಿಕೆ. ರಕ್ಷಣಾ ಪಡೆಯ ಕುಟುಂಬಕ್ಕೆ ವಿಶೇಷ ಯೋಜನೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ. ನಗರಾಡಳಿತಗಳಿಗೆ ವಿಶೇಷ ರೂಪ. ನಿರುದ್ಯೋಗ, ಮಹಿಳಾ ಮೀಸಲಿಗೆ ಹೆಚ್ಚಿನ ಆದ್ಯತೆ. ಸಣ್ಣ ಕೈಗಾರಿಕೆಗಳಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು. ಎಲ್ಲರಿಗೂ ಆರೋಗ್ಯ ಭದ್ರತೆ. ದೇಶದ ಎಲ್ಲಾ ಗ್ರಾಮಗಳಿಗೂ ಬ್ರಾಡ್ ಬ್ಯಾಂಡ್. ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಕೆಜಿ ಒಂದರ ಮೂರು ರೂಪಾಯಿಗೆ ಅಕ್ಕಿ, ಗೋಧಿ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಯೋಗದಿಂದ ದ್ವಂದ್ವ ನೀತಿ: ಬಿಜೆಪಿ ಆಕ್ರೋಶ
ಸ್ವರ್ಣಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ಸೌಮ್ಯಕೊಲೆ ಪ್ರಕರಣದ ರೂವಾರಿಗಳ ಪತ್ತೆ
ಆಯೋಗ-ಬಿಜೆಪಿ ನಡುವಿನ ಯುದ್ಧ ತಾರಕಕ್ಕೆ
ಇಂಫಾಲ್: ಇಬ್ಬರು ಉಗ್ರರ ಹತ್ಯೆ
ನಕ್ಸಲರಿಂದ ಅಪಹೃತ ನಾಲ್ವರ ಹತ್ಯೆ