ಚೆನ್ನೈ: ಚುನಾವಣೆ ಬಂದು ಮನೆಬಾಗಿಲಿಗೆ ನಿಲ್ಲುತ್ತಲೇ, ಮಿತ್ರಪಕ್ಷಗಳೆಲ್ಲ, ಮೈತ್ರಿ ಮರೆತು ತಮ್ಮಿಷ್ಟದಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾ ಮಿತ್ರದ್ರೋಹ ಮಾಡುತ್ತಿರುವುದರಿಂದ ಕಂಗೆಟ್ಟಿರುವ ಕಾಂಗ್ರೆಸ್‌ಗೆ ಅದರ ಇನ್ನೊಂದು ಮಿತ್ರಪಕ್ಷ ಪಿಎಂಕೆ ಮತ್ತೊಂದು ಏಟು ನೀಡಿದೆ.
ಪಾಟಾಳ್ ಮಕ್ಕಳ್ ಕಚ್ಚಿ(ಪಿಎಂಕೆ) ಪಕ್ಷದ ಸಂಸ್ಥಾಪಕ ಎಸ್. ರಾಮದಾಸ್ ಅವರು ಎಐಎಡಿಎಂಕೆಯೊಂದಿಗೆ ಹೊಂದಾಣಿಕೆಗೆ ಸನ್ನದ್ದರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರ ರಾಜೀನಾಮೆ ಸನ್ನಿಹಿತವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.
ರಾಜೀನಾಮೆಯ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತಿದೆಯಾದರೆ, ಎಐಎಡಿಎಂಕೆಯೊಂದಿಗಿನ ಮೈತ್ರಿ ಕುರಿತು ಮಾತುಕತೆಗಳು ಅಂತಿಮಗೊಂಡಿವೆ ಎಂದು ಅನ್ಬುಮಣಿ ಅವರ ತಂದೆ ಎಸ್.ರಾಮದಾಸ್ ಅವರ ಹಿರಿಯ ಸಹಚರರೊಬ್ಬರು ಹೇಳಿದ್ದಾರೆ.
"ಎಐಎಡಿಎಂಕೆಯು ಏಳು ಲೋಕಸಭಾ ಕ್ಷೇತ್ರಗಳನ್ನು ಮತ್ತು ಭವಿಷ್ಯದಲ್ಲಿ ಒಂದು ರಾಜ್ಯಸಭಾ ಸ್ಥಾನವನ್ನು ನೀಡುವ ಆಹ್ವಾನವನ್ನು ಪಿಎಂಕೆ ಸಂಸ್ಥಾಪಕರು ಸ್ವೀಕರಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ನಾವು ಯುಪಿಎ ತೊರೆಯುತ್ತೇವೆ" ಎಂದೂ ಅವರು ತಿಳಿಸಿದ್ದಾರೆ.
ತಮಿಳ್ನಾಡಿನಲ್ಲಿ ಕೊನೆಯ ಹಂತದ ಮೇ 13ರಂದು ಚುನಾವಣೆ ನಡೆಯಲಿದ್ದು, 39 ಸಂಸದರು ಆಯ್ಕೆಯಾಗಲಿದ್ದಾರೆ. |