ಶ್ರೀನಗರ: ಕಾಶ್ಮೀರದಲ್ಲಿ ಸತತ ಐದು ದಿನಗಳ ಕಾಲ ನಡೆದ ಗುಂಡಿನ ಚಕಮಕಿಗೆ ತಾನೇ ಕಾರಣ ಎಂದು ಹೇಳಿರುವ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರಗಾಮಿ ಸಂಘಟನೆಯು, ಭಾರತೀಯ ಪಡೆಗಳ ಮೇಲೆ ಇನ್ನಷ್ಟು ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಕಳೆದ ಶನಿವಾರದಿಂದ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲಿ ಕುಪ್ವಾರ ಜಿಲ್ಲೆಯ ಅರಣ್ಯದಲ್ಲಿ ನಡೆದ ಗುಂಡಿನ ಕಾಳಗದಲ್ಲಿ 17 ಉಗ್ರರು ಹಾಗೂ ಎಂಟು ಸೈನಿಕರು ಹತರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ತೀವ್ರವಾಗಿ ನಡೆದಿರುವ ಈ ಕಾಳಗದಲ್ಲಿ ತನ್ನ ಸದಸ್ಯರು ಪಾಲ್ಗೊಂಡಿದ್ದರು ಎಂದು ಲಷ್ಕರೆ ಹೇಳಿದೆ.
ಕಾಶ್ಮೀರದ ಸ್ವಾತಂತ್ರ್ಯ ಹೋರಾಟವು ಸಂಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ ಎಂಬ ಸಂದೇಶವನ್ನು ಈ ಗುಂಡಿನ ಕಾಳಗವು ಭಾರತಕ್ಕೆ ರವಾನಿಸಬೇಕು ಎಂಬುದಾಗಿ ಲಷ್ಕರೆ ವಕ್ತಾರ ಅಬ್ದುಲ್ಲ ಗಜ್ನಾವಿ ಹೇಳಿದ್ದಾನೆ. ಅಲ್ಲದೆ ಇನ್ನಷ್ಟು ದಾಳಿಗಳನ್ನು ನಡೆಸುವ ಬೆದರಿಕೆಯನ್ನೂ ಹಾಕಿದ್ದಾನೆ.
ಆತ ಗೌಪ್ಯ ಸ್ಥಳವೊಂದರಿಂದ ದೂರವಾಣಿಯಲ್ಲಿ ಮಾತನಾಡಿದ್ದಾನೆ. ಅರಣ್ಯಪ್ರದೇಶದಲ್ಲಿ ಲಷ್ಕರೆ ಉಗ್ರರು ಹೊಂಚು ದಾಳಿ ನಡೆಸುವ ಮೂಲಕ ಗುಂಡಿನ ಚಕಮಕಿ ಆರಂಭಗೊಳಿಸಿದ್ದಾರೆ ಎಂದು ಹೇಳಿದ ಆತ, ಈ ಕಾಳಗದಲ್ಲಿ ಭಾರತದ 25 ಸೈನಿಕರು ಮತ್ತು ಬರಿಯ ಹತ್ತುಮಂದಿ ಲಷ್ಕರೆ ಕಾರ್ಯಕರ್ತರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾನೆ. ಗುಂಡಿನ ಕಾಳಗದಲ್ಲಿ 17 ಉಗ್ರರು ಮತ್ತು ಎಂಟುಮ ಮಂದಿ ಸೈನಿಕರು ಸಾವನ್ನಪ್ಪಿರುವುದಾಗಿ ಸೇನೆಯು ಹೇಳಿದೆ. ಅಲ್ಲದೆ ಉಗ್ರರ ಕುರಿತು ಸುಳಿವು ಲಭಿಸಿದ ಸೇನೆಯು ತಾನೇ ಕಾರ್ಯಾಚರಣೆ ಆರಂಭಿಸಿರುವುದಾಗಿಯೂ ಹೇಳಿದೆ.
ಕಳೆದ ನವೆಂಬರ್ 27ರಂದು ಮುಂಬೈಯಲ್ಲಿ 180ಕ್ಕೂ ಹೆಚ್ಚು ಮಂದಿಯನ್ನು ಆಹುತಿ ತೆಗೆದು ಕೊಂಡಿರುವ ಭಯೋತ್ಪಾದನಾ ದಾಳಿಗೆ ಲಷ್ಕರೆ ಸಂಘಟನೆ ಕಾರಣ ಎಂದು ಭಾರತ ಸರ್ಕಾರ ಆರೋಪಿಸಿದೆ. ಆದರೆ ಲಷ್ಕರೆಯು ಈ ಆರೋಪವನ್ನು ತಳ್ಳಿಹಾಕಿದೆ. |