ಅರ್‌ಜೆಡಿ ಹಾಗೂ ಎಲ್‌ಜೆಪಿಗಳು ಕಾಂಗ್ರೆಸ್‌ಗೆ ಟಾಟಾ ಹೇಳಿರುವ ಬೆನ್ನಿಗೇ, ಯುಪಿಎಯ ಇನ್ನೊಂದು ಪ್ರಮುಖ ಅಂಗ ಪಕ್ಷವಾಗಿದ್ದ ಪಿಎಂಕೆ ಮೈತ್ರಿ ಮುರಿದುಕೊಂಡು ಎಐಎಡಿಎಂಕೆ ಜತೆ ಕೈ ಜೋಡಿಸಿದೆ.
ಪಿಎಂಕೆಯು ಗುರುವಾರ ಎಐಎಡಿಎಂಕೆ ವರಿಷ್ಠೆ ಜಯಲಲಿತಾರೊಂದಿಗೆ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದು ಯುಪಿಎಗೆ ಇದರಿಂದ ಬಲವಾದ ಪೆಟ್ಟು ಬಿದ್ದಿದೆ.
ಪಿಎಂಕೆ ಮುಖ್ಯಸ್ಥ ಎಸ್. ರಾಮದಾಸ್ ಮತ್ತು ಅವರ ಪುತ್ರ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಸೇರಿದಂತೆ ಪಕ್ಷದ ಪ್ರಮುಖ ನೀತಿನಿರ್ಮಾಣ ಮಂಡಳಿಯು ಸಭೆ ಸೇರಿದ್ದು ಎಐಎಡಿಎಂಕೆಯೊಂದಿಗಿನ ಮೈತ್ರಿ ಕುರಿತು ಔಪಚಾರಿಕ ನಿರ್ಧಾರ ಕೈಗೊಂಡಿದೆ.
ಎಐಎಡಿಎಂಕೆಯು ಏಳು ಲೋಕಸಭಾ ಕ್ಷೇತ್ರಗಳನ್ನು ಮತ್ತು ಭವಿಷ್ಯದಲ್ಲಿ ಒಂದು ರಾಜ್ಯಸಭಾ ಸ್ಥಾನವನ್ನು ನೀಡುವ ಆಹ್ವಾನವನ್ನು ಪಿಎಂಕೆಗೆ ನೀಡಿತ್ತು ಎನ್ನಲಾಗಿದೆ.
ಪಿಎಂಕೆ ಹಾಗೂ ಕಾಂಗ್ರೆಸ್ ನಡುವಿನ ಭಿನ್ನಮತವನ್ನು ಪರಿಹರಿಸಲು ಗೃಹಸಚಿವ ಪಿ.ಚಿದಂಬರಂ ಅವರು ಬುಧವಾರ ಪಿಎಂಕೆ ನಾಯಕರೊಂದಿಗೆ ನಡೆಸಿರುವ ಸಂಧಾನ ಮಾತುಕತೆ ಮುರಿದು ಬಿದ್ದಿತ್ತು. |