ಮಾಜಿ ಪ್ರಧಾನಿಗಳ ಕುಟುಂಬದ ಸುಮಾರು ಎಂಟು ಮಂದಿ ಉತ್ತರ ಪ್ರದೇಶದ ಚುನಾವಣಾ ಕಣದಲ್ಲಿದ್ದಾರೆ. ಸಂಸತ್ತಿಗೆ ಅತಿ ಹೆಚ್ಚು ಸದಸ್ಯರನ್ನು ಕಳುಹಿಸುವ ಖ್ಯಾತಿಯ ಉತ್ತಪ ಪ್ರದೇಶದಲ್ಲಿ ಗರಿಷ್ಠ ಕ್ಷೇತ್ರಗಳಲ್ಲಿ ಮಾಜಿ ಪ್ರಧಾನಿಗಳ ಕುಟುಂಬಿಕರು ಕಣಕ್ಕಿಳಿದಿದ್ದು 15ನೆ ಲೋಕಸಭಾ ಪ್ರವೇಶದ ಕನಸಿನಲ್ಲಿದ್ದಾರೆ. ಕರ್ನಾಟದಲ್ಲಿಯೂ, ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಕುಮಾರ ಸ್ವಾಮಿ ಹಾಗೂ ಸೊಸೆ ಭವಾನಿ ಸ್ಫರ್ಧಿಸಲಿದ್ದಾರೆ ಎನ್ನಲಾಗಿದೆ.
ರಾಷ್ಟ್ರಕ್ಕೆ ಮೂರು ಪ್ರಧಾನಿಗಳನ್ನು ನೀಡಿದ ನೆಹರೂ ಕುಟುಂಬದ ಇಬ್ಬರು ಸೊಸೆಯರಾದ ಸೋನಿಯಾ ಗಾಂಧಿ, ಮನೇಕಾ ಗಾಂಧಿ ಅವರುಗಳು ಅನುಕ್ರಮವಾಗಿ ರಾಯ್ ಬರೇಲಿ ಹಾಗೂ ಎಒನ್ಲಾ ಕ್ಷೇತ್ರಗಳಿಂದ ಸ್ಫರ್ಧಿಸುತ್ತಿದ್ದರೆ, ಅವರ ಮಕ್ಕಳಾದ ರಾಹುಲ್ ಗಾಂಧಿ ಹಾಗೂ ವರುಣ್ ಗಾಂಧಿ ಅಮೇಠಿ ಮತ್ತು ಪಿಲಿಭಿತ್ ಕ್ಷೇತ್ರದಿಂದ ಸ್ಫರ್ಧಿಸುತ್ತಿದ್ದಾರೆ.
ಈ ವಿಷಯದಲ್ಲಿ ತನ್ನ ಓರಗಿತ್ತಿಯನ್ನು ಅನುಸರಿಸಿರುವ ಮನೇಕಾ ತನ್ನ ಪುತ್ರನಿಗಾಗಿ ತನ್ನ ಪಿಲಿಭಿತ್ ಕ್ಷೇತ್ರವನ್ನು ಬಿಟ್ಟುಕೊಟ್ಟು ತಾನು ಇನ್ನೊಂದು ಕ್ಷೇತ್ರದಿಂದ ಸ್ಫರ್ಧಿಸುತ್ತಿದ್ದಾರೆ. ಸೋನಿಯಾ ತನ್ನ ಪುತ್ರನಿಗಾಗಿ ಅಮೇಠಿ ಕ್ಷೇತ್ರವನ್ನು ಬಿಟ್ಟಿಕೊಟ್ಟಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಸ್ಫರ್ಧಿಸಿದ್ದ ಕ್ಷೇತ್ರ ಅಮೇಠಿ.
ಇವರಲ್ಲದೆ, ಮಾಜಿ ಪ್ರಧಾನಿ ದಿವಂಗತ ಚರಣ್ ಸಿಂಗ್ ಅವರ ಪುತ್ರ ಹಾಗೂ ಮೊಮ್ಮಗ ಅವರೂ ಸಹ ಅದೃಷ್ಟ ಪರೀಕ್ಷೆಯ ಹವಣಿಕೆಯಲ್ಲಿದ್ದಾರೆ. ಪುತ್ರ ಅಜಿತ್ ಸಿಂಗ್ ಅವರು ಆರ್‌ಜೆಡಿಯಿಂದ ಬಾಗ್‌ಪತ್‌ನಿಂದ ಸ್ಫರ್ಧಿಸುತ್ತಿದ್ದರೆ, ಮೊಮ್ಮಗ ಜಯಂತ್ ಚೌಧರಿ ಮಥುರಾದಿಂದ ಕಣಕ್ಕಿಳಿಯಲಿದ್ದಾರೆ.
ವಿಪಿ ಸಿಂಗ್ ಅವರ ಪುತ್ರ ಅಜೆಯ ಸಿಂಗ್ ಅವರು ತನ್ನ ತಂದೆಯ ಕ್ಷೇತ್ರವಾಗಿದ್ದ ಫತೇಪುರದಿಂದ ಎಲ್‌ಜೆಪಿ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ. ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರನೂ ತಂದೆಯ ಕ್ಷೇತ್ರವಾಗಿ ಬಲ್ಲಿಯಾದಿಂದ ಸ್ಫರ್ಧೆಗೆ ಧುಮುಕಲಿದ್ದಾರೆ. ತಂದೆ ಮರಣಾನಂತರ ಸಮಾಜವಾದಿ ಪಕ್ಷವು ನೀರಜ್ ಕುಮಾರ್‌ಗೆ ಉಪಚುನಾವಣೆಗೆ ಟಿಕೆಟ್ ನೀಡಿತ್ತು. ಪಕ್ಷವು ಇದೀಗಲೂ ಅದೇ ವಿಶ್ವಾಸವನ್ನು ಮುಂದುವರಿಸಿದೆ,
ಇತ್ತ ಕರ್ನಾಟಕದಲ್ಲಿ ದೇವೇಗೌಡರ ಮೆಚ್ಚಿನ ಪುತ್ರ ಕುಮಾರಸ್ವಾಮಿ ಅವರು ಕಣಕ್ಕಿಳಿಯುವುದು ಖಚಿತ. ಬಹುತೇಕ ಇವರ ಕ್ಷೇತ್ರ ಬೆಂಗಳೂರು ದಕ್ಷಿಣ. ಈ ಮಧ್ಯೆ ಇನ್ನೋರ್ವ ಪುತ್ರ ರೇವಣ್ಣ ಅವರ ಪತ್ನಿ ಭವಾನಿ ಅವರೂ ಈ ಬಾರಿ ಚುನಾವಣೆ ರುಚಿನೋಡಲು ಸನ್ನದ್ಧರಾಗಿದ್ದು ಚಿಕ್ಕಬಳ್ಳಾಪುರದಿಂದ ಕಣಕ್ಕಿಳಿಯಲಿದ್ದಾರೆ ಎಂಬುದಾಗಿ ಬಲ್ಲಮೂಲಗಳು ಹೇಳುತ್ತಿವೆ.
|