ಕೊನೆಗೂ ತನ್ನ ಮೌನ ಮುರಿದಿರುವ ಮನೇಕಾ ಗಾಂಧಿ, ತನ್ನ ಪುತ್ರನ ವಿವಾದಾಸ್ಪದ ಭಾಷಣವನ್ನು ಸಮರ್ಥಿಸಿಕೊಳ್ಳುತ್ತಾ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, "ತನ್ನ ಸಿಖ್ ವಿರೋಧಿ ಕ್ರಿಯೆಗಳನ್ನು ಮರೆಮಾಚಲು ಕಾಂಗ್ರೆಸ್ ಈ ಪ್ರಕರಣವನ್ನು ಬಳಿಸಿಕೊಳ್ಳುತ್ತಿದೆ" ಎಂದು ದೂರಿದ್ದಾರೆ.
"ಇಂತಹ ಟೇಪ್‌ಗಳನ್ನು ತೋರಿಸುವುದು ಕಾಂಗ್ರೆಸ್‌ನ ಸಿದ್ಧಾಂತವಾಗಿಬಿಟ್ಟಿದೆ. ಅದು ತನ್ನ ಸಿಖ್ ವಿರೋಧಿ ನಿಲುವನ್ನು ಮರೆಸಲು ಇಂತಹ ಖೊಟ್ಟಿ ಟೇಪ್‌ಗಳನ್ನು ತೋರಿಸುತ್ತದೆ" ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
"ಸಾವಿರಾರು ಸಿಖ್ಖರ ಮಾರಣ ಹೋಮ ನಡೆಸಿರುವ ಸಿಖ್ ವಿರೋಧಿ ಗಲಭೆಗಳಲ್ಲಿ ಪಾಲ್ಗೊಂಡವರಿಗೆ ಟಿಕೆಟ್ ನೀಡಿರುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು" ಎಂದು ಅವರು ಕಟುಕಿದರು.
ಮುಸ್ಲಿಮರ ವಿರುದ್ಧ ಅವಹೇಳನಕಾರಿ ಭಾಷಣಮಾಡಿರುವ ಸಿಡಿ ಮಾತ್ರವಲ್ಲದೆ, ಸಿಖ್ಖರ ವಿರುದ್ಧ ಮಾತನಾಡುವ ಸಿಡಿಯನ್ನೂ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಒಪ್ಪಿಸಿತ್ತು.
"ಚುನಾವಣಾ ಆಯೋಗವು ಈ ಸಿಖ್ ವಿರೋಧಿ ಸಿಡಿಯನ್ನು ಖೊಟ್ಟಿ ಎಂಬುದಾಗಿ ತಳ್ಳಿಹಾಕಿದೆ. ಅದು ನಿಜವಾಗಿಯೂ ನಕಲಿ ಸಿಡಿಯಾಗಿದ್ದು, ವರುಣ್ ಅಂತಹ ಮಾತುಗಳನ್ನು ಆಡಲೇ ಇಲ್ಲ" ಎಂದು ಮನೇಕಾ ಹೇಳಿದ್ದಾರೆ.
"ಸಿಖ್ ಧರ್ಮದವಳಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಹಿಂದೂಗಳ ರಕ್ಷಣೆಗಾಗಿ ಸಿಖ್ ಧರ್ಮ ಸ್ಥಾಪನೆಯಾಗಿದೆ. ಹಿಂದೂ ಮತ್ತು ಸಿಖ್ ನಡುವೆ ಯಾವುದೇ ವ್ಯತ್ಯಾಸವಿಲ್ಲ" ಎಂದು ಅವರು ಹೇಳಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸೊಸೆಯಾಗಿರುವ ಮನೇಕಾ, ರಾಜಕೀಯ ಸಂಚಲನೆ ಮೂಡಿಸಿದ್ದ ಸಂಜಯ್ ಗಾಂಧಿ ಪತ್ನಿ. ಕುಟುಂಬದಿಂದ ದೂರವಾಗಿರುವ ಮನೇಕಾ ಬಿಜೆಪಿ ವತಿಯಿಂದ ಚುನಾವಣೆಗೆ ಸ್ಫರ್ಧಿಸುತ್ತಿದ್ದಾರೆ. |