ಮನಮೋಹನ್ ಸಿಂಗ್ ಅವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಘೋಷಿಸಿರುವುದನ್ನು ಸ್ವಾಗತಿಸಿರುವ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ, ಆದರೆ ಸಿಂಗ್ ಅವರು ರಾಜ್ಯಸಭಾ ಹಾದಿಯ ಮೂಲಕ ಸಂಸತ್ತಿಗೆ ಇಳಿಯುವ ಬದಲಿಗೆ, ಲೋಕಸಭಾ ಸ್ಥಾನದಲ್ಲಿ ಸ್ಫರ್ಧಿಸುವ ಮೂಲಕ ಸಂಸತ್ತನ್ನು ಪ್ರವೇಶಿಸಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಸಿಂಗ್ ಅವರೊಂದಿಗೆ ಯಾವುದೇ ವಿಚಾರದ ಕುರಿತು ಮುಖಾಮುಖಿ ಚರ್ಚೆಗೆ ತಾನು ಸಿದ್ಧ ಎಂದು ಹೇಳಿದ್ದಾರೆ.
"ಕೊನೆಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ತನ್ನ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸುವ ಮೂಲಕ ಎಲ್ಲಾ ಊಹಾಪೋಹಗಳನ್ನು ಬದಿಗೆ ತಳ್ಳಿರುವುದು ಉತ್ತಮ ಬೆಳವಣಿಗೆ" ಎಂದು ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಆಡ್ವಾಣಿ ಅವರು ಅರುಣಾಚಲ ಪ್ರದೇಶದಲ್ಲಿ ನಡೆದ ಚುನಾವಣಾ ರ‌್ಯಾಲಿಯೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಿದ್ದೇ ಆದರೆ ಅವರು ಜನಸಾಮಾನ್ಯರಿಗೆ ಹೆಚ್ಚು ಲಭ್ಯವಾಗುತ್ತಾರೆ ಎಂದು ನುಡಿದರು. ಅಲ್ಲದೆ ಅಮೆರಿಕದಲ್ಲಿ ರೂಢಿಯಲ್ಲಿರುವಂತೆ ವಿವಿಧ ವಿಚಾರಗಳ ಕುರಿತು ಟಿವಿ ವಾಹಿನಿಗಳಲ್ಲಿ ಪ್ರಧಾನಿ ಸಿಂಗ್ ಅವರೊಂದಿಗೆ ನೇರಾನೇರ ಚರ್ಚೆಗೆ ತಾನು ಸಿದ್ಧ ಎಂಬುದಾಗಿ ಆಡ್ವಾಣಿ ಸವಾಲು ಹಾಕಿದ್ದಾರೆ.
ರಾಷ್ಟ್ರವು ಇದುವರೆಗೆ ಕಂಡಿರುವ ಪ್ರಧಾನಿಗಳಲ್ಲೇ ಸಿಂಗ್ ಅತ್ಯಂತ ದುರ್ಬಲ ಪ್ರಧಾನಿ ಎಂದು ಹೇಳಿದ ಕೇಸರಿ ಪಡೆ ನಾಯಕ, 10, ಜನಪಥ್‌ನಿಂದ ಯಾವುದೇ ಹಸಿರುನಿಶಾನೆ ಲಭಿಸದೆ ಅವರು ಏನೂ ಮಾಡಲು ಸಾಧ್ಯವಿಲ್ಲ. ಪ್ರಧಾನ ಮಂತ್ರಿ ಕಚೇರಿಯಲ್ಲಿ ನೇಮಕವಾಗಿರುವ ಸಚಿವರೊಬ್ಬರು ಪ್ರಧಾನಿಯವರ ಪ್ರಸ್ತಾಪಗಳನ್ನು ಸೋನಿಯಾ ಗಾಂಧಿಯವರ ಬಳಿಗೆ ಒಯ್ಯುತ್ತಾರೆ. ಸೋನಿಯಾ ಒಪ್ಪಿಗೆ ಇಲ್ಲದೆ, ಸಿಂಗ್ ಅತ್ತಿತ್ತ ಚಲಿಸರು" ಎಂಬುದಾಗಿ ಮತ್ತೆ ಟೀಕಿಸಿದ್ದಾರೆ.
ಈ ಹಿಂದೆ ಪ್ರಧಾನಿಯಾಗಿದ್ದ ದೇವೇ ಗೌಡರೂ ಸಹ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದಿದ್ದರು ಮತ್ತು ಹೆಚ್ಚಿನ ಅಧಿಕಾರದಿಂದ ಕಾರ್ಯ ನಿರ್ವಹಿಸಿದ್ದರು ಎಂದು ಅವರು ಪ್ರಧಾನಿಯವರನ್ನು ಕೆಣಕಿದ್ದಾರೆ.
ಅರುಣಾಚಲ ಪ್ರದೇಶದ ಮೇಲೆ ಚೀನವು ಹಕ್ಕುಸಾಧಿಸುತ್ತಿರುವುದನ್ನು ಪ್ರಸ್ತಾಪಿಸಿದ ಅವರು ಆ ರಾಷ್ಟ್ರವು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಬೇಕಾದರೆ, ಅದು ಅರುಣಾಚಲ ಪ್ರದೇಶದ ಮೇಲೆ ಹಕ್ಕುಸಾಧನೆಯನ್ನು ನಿಲ್ಲಿಸಬೇಕು ಎಂದು ನುಡಿದರು.
ಎನ್‌ಸಿಪಿ ನಾಯರ ಪರ್ನೋ ಎ ಸಂಗ್ಮಾ ಅವರು ಈಶಾನ್ಯ ಪ್ರದೇಶದ ಎಲ್ಲಾ ಕಾಂಗ್ರೆಸ್ ವಿರೋಧಿ ಶಕ್ತಿಗಳನ್ನು ಒಂದು ಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಇದೊಂದು ಉತ್ತಮ ಕಾರ್ಯ ಹಾಗೂ ತಾನು ಸಂಗ್ಮಾರನ್ನು ಗೌರವಿಸುವುದಾಗಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ನುಡಿದರು. |