ಚುನಾವಣಾ ಚಿಹ್ನೆಗಾಗಿ ಬಡಿದಾಡುತ್ತಿರುವ ಪ್ರಜಾರಾಜ್ಯಂ, ಲೋಕಸತ್ತಾ ಹಾಗೂ ಡಿಎಂಡಿಕೆ ಪಕ್ಷಗಳಿಗೆ, ಮುಂಬರುವ ಚುನಾವಣೆಯಲ್ಲಿ ಸ್ಫರ್ಧಿಸಲು ಈ ಪಕ್ಷಗಳು ಬಯಸುವ ಚಿಹ್ನೆಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಶುಕ್ರವಾರ ಆದೇಶ ನೀಡಿದೆ.
ಮುಖ್ಯನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ಪಿ. ಸತಾಶಿವನ್ ಅವರನ್ನೊಳಗೊಂಡಿರುವ ನ್ಯಾಯಪೀಠವು "ಈ ಆದೇಶವು ಮಧ್ಯಂತರವಾಗಿದ್ದು ಈ ಚುನಾವಣೆಗೆ ಮಾತ್ರ ಎಂಬುದಾಗಿ ಸ್ಪಷ್ಟಪಡಿಸಿದ್ದು, ಪಕ್ಷಗಳು ವಿವಾದವು ಅಂತಿಮವಾಗಿ ತೀರ್ಮಾನಗೊಳ್ಳುವ ತನಕ ಯಾವುದೇ ಹಕ್ಕು ಸಾಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಂಧ್ರ ಪ್ರದೇಶದ ಪ್ರಜಾರಾಜ್ಯಂ, ತಮಿಳ್ನಾಡಿನ ಡಿಎಂಡಿಕೆ ಹಾಗೂ ಮಹಾರಾಷ್ಟ್ರದ ಲೋಕ ಸತ್ತಾಗಳು ತಮ್ಮ ಇಚ್ಚೆಯ ಚಿಹ್ನಗಳಿಗಾಗಿ ಬೇಡಿಕೆ ಸಲ್ಲಿಸಿದ್ದವು. ಪ್ರಜಾರಾಜ್ಯಂ ರೈಲು ಎಂಜಿನ್, ಡಿಎಂಡಿಕೆಯು ಡ್ರಮ್ಮು ಹಾಗೂ ಲೋಕಸತ್ತಾ ಪಕ್ಷವು ವಿಶಲ್ ಚಿಹ್ನೆಯನ್ನು ಮಂಜೂರು ಮಾಡಲು ಚುನಾವಣಾ ಆಯೋಗವನ್ನು ವಿನಂತಿಸಿದ್ದವು. ಆದರೆ ಅಂಗೀಕೃತ ರಾಷ್ಟ್ರೀಯ ಅಥವಾ ರಾಜ್ಯಮಟ್ಟದ ಪಕ್ಷಗಳು ಮಾತ್ರ ನಿರ್ದಿಷ್ಟ ಮತ್ತು ಸಾಮಾನ್ಯ ಚಿಹ್ನೆಯನ್ನು ಹೊಂದಬಹುದು ಎಂಬುದಾಗಿ ಈ ಪಕ್ಷಗಳ ಮನವಿಯನ್ನು ಚುನಾವಣಾ ಆಯೋಗವು ತಳ್ಳಿಹಾಕಿತ್ತು.
ಆಂಧ್ರಪ್ರದೇಶದಲ್ಲಿ ಎಲ್ಲಾ ನೋಂದಾಯಿತ ಪಕ್ಷಗಳಿಗೆ ಸಾಮಾನ್ಯ ಚಿಹ್ನೆಗಳನ್ನು ನೀಡುವಂತೆ ಆಂಧ್ರಪ್ರದೇಶ ಹೈಕೋರ್ಟ್ ನೀಡಿರುವ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರ ಪ್ರಜಾರಾಜ್ಯಂ, ಮಾಜಿ ಐಎಎಸ್ ಅಧಿಕಾರಿ ಜೈ ಪ್ರಕಾಶ್ ನಾರಾಯಣ್ ಅವರ ಲೋಕ್ ಸತ್ತಾ ಪಕ್ಷ ಹಾಗೂ ತಮಿಳು ಸೂಪರ್ ಸ್ಟಾರ್ ವಿಜಯ್ ಕಾಂತ್ ಅವರ ಪಕ್ಷಗಳು ಚಿಹ್ನೆಗಳಿಗೆ ಬೇಡಿಕೆ ಸಲ್ಲಿಸಿವೆ. |