ಗೋಧ್ರಾ ಗಲಭೆಯ ಆರೋಪಿ ಗುಜರಾತ್ ಸಚಿವೆ ಮಾಯಾ ಕೊಡ್ನಾನಿ ಅವರು, ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡದ ಎದುರು ಶರಣಾಗಿದ್ದಾರೆ. ಗುಜರಾತ್ ಹೈಕೋರ್ಟ್ ಮಾಯಾ ಹಾಗೂ ಇನ್ನೋರ್ವ ಶಾಸಕ ಜೈದೀಪ್ ಪಟೇಲ್ ಅವರುಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಅವರಿಬ್ಬರೂ ತನಿಖಾ ತಂಡದ ಎದುರು ಹಾಜರಾಗಿದ್ದಾರೆ.
ತಲೆಮರೆಸಿಕೊಂಡಿದ್ದ ಕೊಡ್ನಾನಿ ಹೈಕೋರ್ಟ್ ಆದೇಶ ಹೊರಬೀಳುತ್ತಿರುವಂತೆ ತನ್ನ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಗೋಧ್ರಾ ನಂತರದ ಗಲಭೆಯ ತನಿಖೆಗಾಗಿ ನೇಮಕವಾಗಿರುವ ವಿಶೇಷ ತನಿಖಾ ತಂಡದ ಎದುರು ಶರಣಾದರು. ಅವರು ಅಹಮದಾಬಾದಿನ ನರೋಡ ಪಾಟಿಯ ಮತ್ತು ನರೋಡ ಗಾಮ ಪ್ರದೇಶದಲ್ಲಿ ನಡೆದ ಗಲಭೆಗಳ ನೇತೃತ್ವ ವಹಿಸಿದ್ದರು ಎಂದು ಆಪಾದಿಸಲಾಗಿದೆ. ಈ ಗಲಭೆಯಲ್ಲಿ 106 ಮಂದಿ ಸಾವನ್ನಪ್ಪಿದ್ದರು.
ಇದೇ ವೇಳೆ ತನಿಖಾ ತಂಡವು ವಿಶ್ವಹಿಂದೂ ಪರಿಷತ್ ನಾಯಕ ಜೈದೀಪ್ ಪಟೇಲ್ ಅವರನ್ನೂ ವಶಕ್ಕೆ ತೆಗೆದುಕೊಂಡಿದೆ. ತನಿಖಾ ತಂಡವು ಮಂಡಿಸಿರುವ ಸಾಕ್ಷ್ಯಾಧಾರಗಳ ಪ್ರಕಾರ ಮೇಲ್ನೋಟಕ್ಕೆ ಇವರಿಬ್ಬರು ತಪ್ಪಿತಸ್ಥರೆಂದು ಕಾಣುವ ಕಾರಣ ಅವರ ಜಾಮೀನು ನಿರಾಕರಿಸಿರುವುದಾಗಿ ನ್ಯಾಯಾಯಲಯ ಹೇಳಿದೆ. |