ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಂಚಾರ ನಿಯಮ ಉಲ್ಲಂಘನೆ ದಂಡದಲ್ಲಿ ಭಾರೀ ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಚಾರ ನಿಯಮ ಉಲ್ಲಂಘನೆ ದಂಡದಲ್ಲಿ ಭಾರೀ ಹೆಚ್ಚಳ
ಸಂಚಾರ ನಿಯಮಗಳನ್ನು ಗಾಳಿಗೆ ತೂರಿದಿರೋ, ಜಾಗ್ರತೆ. ಯಾಕೆಂದರೆ ಈವರೆಗೆ ನೂರೋ, ಇನ್ನೂರೋ ಕೊಟ್ಟು ಮುಂದೆ ಸಾಗಬಹುದಿತ್ತು. ಆದರೆ ಇನ್ನು ಪರಿಸ್ಥಿತಿ ಹಾಗಿಲ್ಲ. ನಿಯಮಗಳನ್ನು ಉಲ್ಲಂಘಿಸಿ ಪೋಲೀಸರ ಕೈಗೆ ಅತಿಥಿಯಾದರೆ ನಿಮ್ಮ ಜೇಬು ತೂತಾದಂತೆಯೇ ಸರಿ.

ಸದ್ಯದಲ್ಲೇ ಮೋಟಾರು ವಾಹನಗಳ ಅಧಿನಿಯಮ-1988ಕ್ಕೆ ತಿದ್ದುಪಡಿ ತರಲಿದ್ದು, ಹೊಸ ತಿದ್ದುಪಡಿ ಮಸೂದೆ ಜಾರಿಗೆ ಬರಲಿದೆ. ಈ ಮಸೂದೆ ಜಾರಿಗೆ ಬಂದರೆ, ಈವರೆಗೆ ಇದ್ದ ಸಂಚಾರ ನಿಯಮಗಳ ಉಲ್ಲಂಘನೆಯ ದಂಡ ಬರೋಬ್ಬರಿ ಐದಾರು ಪಟ್ಟು ಹೆಚ್ಚಲಿದೆ!

ಉನ್ನತ ಅಧಿಕಾರಿಗಳ ಪ್ರಕಾರ, ಅತಿವೇಗದ ಚಾಲನೆ, ಕೆಂಪುದೀಪ ದಾಟಿದರೆ, ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸದಿದ್ದರೆ, ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದರೆ ಇನ್ನು ಅತಿ ಹೆಚ್ಚು ಬೆಲೆ ತೆರೆಬೇಕಾಗುತ್ತದೆ. ಕಾಮನ್‌ವೆಲ್ತ್ ಗೇಮ್ಸ್ ಭಾರತದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಸುವ್ಯವಸ್ಥೆಯನ್ನು ಕಾಪಾಡಲು ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರೂ ಇದು ಇಡೀ ಭಾರತಕ್ಕೆ ಅನ್ವಯವಾಗಲಿದೆ.

ತಿದ್ದುಪಡಿ ಪ್ರಸ್ತಾವನೆಯಲ್ಲಿರುವಂತೆ, ಕೆಂಪುದೀಪ ದಾಟುವುದು, ಸ್ಟಾಪ್ ಲೈನ್ ದಾಟುವುದು, ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ, ಟಿಂಟೆಡ್ ಗ್ಲಾಸ್, ತಪ್ಪಿರುವ ನಂಬರ್ ಪ್ಲೇಟ್, ಸೀಟ್ ಬೆಲ್ಟ್ ಕಟ್ಟದಿರುವುದು, ಸೈಲೆನ್ಸ್ ಝೋನ್‌ನ್ಲಲಿ ಶಬ್ದ ಮಾಡುವುದು ಹಾಗೂ ಫ್ಯಾನ್ಸಿ ಲೈಟ್ ಬಳಸಿ ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದರೆ ಈವರೆಗೆ ಇದ್ದ 100 ರೂ. ದಂಡವನ್ನು 500 ರೂ.ಗಳಿಗೆ ಹೆಚ್ಚಿಸಲಾಗಿದೆ. ಮೊಬೈಲ್‌ನಲ್ಲಿ ವಾಹನ ಚಾಲನೆ ಸಂದರ್ಭ ಮಾತನಾಡುತ್ತಿದ್ದರೆ, ಈಗಿದ್ದ 400 ರೂ.ಗಳ ದಂಡ, 1,000 ರೂ.ಗಳಿಗೆ ಏರಿದೆ. ನೋಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದರೆ ಜೇಬಿಗೆ ಬರೋಬ್ಬರಿ ಕತ್ತರಿಯೇ ಸರಿ. ಯಾಕೆಂದರೆ, ಈಗಿದ್ದ 100 ರೂ. ದಂಡ, ಇನ್ನು ಅಂತಹ ತಪ್ಪಿಗೆ 1,500 ರೂ.ಗಳಿಗೆ ಏರಲಿದೆ. ಅತಿವೇಗದ ಚಾಲನೆ ಮಾಡಿದರೆ ಈವರೆಗೆ ಇದ್ದ 400 ರೂ. ದಂಡ 1,000 ರೂ.ಗಳಿಗೆ ಏರಿದೆ. ಇದು ವಾಣಿಜ್ಯ ಬಳಕೆಯ ವಾಹನವಾಗಿದ್ದರೆ, ದಂಡ ಇನ್ನೂ ಹೆಚ್ಚು. ಅದು ಈಗಿದ್ದ 400 ರೂ.ಗಳಿಂದ 2,000 ರೂ.ಗಳಿಗೆ ಏರಿದೆ.

ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದರೆ ಈಗಿದ್ದ ದಂಡ 500 ರೂ. ಈಗ 2,000 ರೂ.ಗಳಿಗೆ ಏರಿದೆ. ಪರ್ಮಿಟ್ ಇಲ್ಲದಿದ್ದರೆ ಈಗಿದ್ದ 2,000 ರೂ. ದಂಡ 10,000 ರೂ.ಗಳಿಗೆ ಏರಿದೆ. ರಿಜಿಸ್ಟ್ರೇಶನ್ ಇಲ್ಲದೆ ವಾಹನ ಚಲಾಯಿಸಿದರೆ, ಖಾಸಗಿಯಾದರೆ ಈಗಿದ್ದ 2,000 ರೂ. 4,000ರೂ.ಗಳಿಗೆ ಏರಿದ್ದರೆ, ವಾಣಿಜ್ಯ ವಾಹನಗಳಿಗೆ ಈಗಿದ್ದ 2,000 ರೂ. 10,000 ರೂ.ಗಳಿಗೇರಿದೆ. ಆದರೆ, ಕುಡಿದು ವಾಹನ ಚಲಾಯಿಸಿದರೆ ಈಗಿದ್ದ 2,000 ರೂ. ದಂಡ ಇನ್ನು ಮುಂದೆಯೂ 2,000ವೇ ಆಗಿರಲಿದೆ. ಅಪಾಯಕಾರಿ ಚಾಲನೆಗೆ ಈಗಿದ್ದ 1,000 ರೂ. ದಂಡವೂ ಹಾಗೆಯೇ ಮುಂದುವರಿಯಲಿದೆ.

ಇದಲ್ಲದೆ ಸಂಚಾರ ನಿಯಮಗಳ ಅಧಿನಿಯಮದ ತಿದ್ದುಪಡಿಯೊಂದಿಗೆ ಹೊಸತೊಂದು ಅಧಿನಿಯಮ ತರುವ ಬಗ್ಗೆಯೂ ಪ್ರಸ್ತಾವನೆಯಿದೆ. ಸೆಕ್ಷನ್ '187-ಎ'ಯಡಿ ಈ ಹೊಸ ಅಧಿನಿಯವಿರಲಿದ್ದು, ಒಬ್ಬ ವಾಹನ ಚಾಲಕನ ವೇಗದ ಚಾಲನೆ ಅಥವಾ ನಿರ್ಲಕ್ಷ್ಯದ ಚಾಲನೆಯಿಂದ ಇನ್ನೊಬ್ಬ ವಾಹನ ಚಾಲಕನನ್ನು ಘಾಸಿಗೊಳಿಸಿದರೆ ಅಂತಹ ಸಂದರ್ಭ ನಿರ್ಲಕ್ಷ್ಯ ವಹಿಸಿದ ವಾಹನ ಚಾಲಕನಿಗೆ 5,000 ರೂ. ದಂಡವಿರಲಿದೆ. ಪೋಲೀಸರ ಸಲಹೆಯ ಪ್ರಕಾರ, ಇದನ್ನು ಇನ್ನೂ ಹೆಚ್ಚುಗೊಳಿಸಬೇಕಾಗಿದ್ದು, 10,000 ರೂ.ಗಳವರೆಗೂ ದಂಡ ತೆರಬೇಕು ಎಂದು ಒತ್ತಾಯಿಸಿದ್ದಾರೆ. ಹೀಗೆ ಸಂಗ್ರಹಿಸಿದ ನಿಧಿಯನ್ನು 'ಹಿಟ್ ಅಂಡ್ ರನ್' ಪ್ರಕರಣಗಳಲ್ಲಿ ಬಲಿಪಶುವಾದ ವಾಹನ ಚಾಲಕರಿಗೆ ನೀಡಲು ಬಳಸಲಾಗುತ್ತದೆ.

ಈಗಿರುವ ಸಂಚಾರ ನಿಯಮ ಉಲ್ಲಂಘನೆ ದಂಡ 1970ರಲ್ಲಿ ತಿದ್ದುಪಡಿ ತರಲಾಗಿರುವುದೇ ಆಗಿದ್ದು, ಹಾಗಾಗಿ, ಇಷ್ಟು ಪ್ರಮಾಣಕ್ಕೆ ಏರಿಸುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಅಂದಿನ ಸಂಚಾರ ನಿಯಮ ಉಲ್ಲಂಘನೆಗೂ ಈಗಿನ ಉಲ್ಲಂಘನೆಯೂ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಸರ್ಕಾರ ಬಂದ ತಕ್ಷಣ ಈ ತಿದ್ದುಪಡಿ ಜಾರಿಗೆ ಬರುವ ಸಂಭವವಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನ್ಯಾನೋ ಬಿಡುಗಡೆ ನನ್ನ ವಿರುದ್ಧದ ಸಂಚು: ಮಮತಾ
ಪ್ರಧಾನಿ ಕುರಿತ ಮೋದಿ ಹೇಳಿಕೆ 'ಕಳಪೆ': ಕಾಂಗ್ರೆಸ್
ವರುಣ್ ಗಾಂಧಿಗೆ 2 ದಿನ ನ್ಯಾಯಾಂಗ ಬಂಧನ
ಉತ್ತರ ಪ್ರದೇಶ: ಪಾಂಡೆ ವಿರುದ್ಧ ವಾರಂಟ್‌
ಕೇರಳ: ಸಿಪಿಎಂ ಕಾರ್ಯಕರ್ತನ ಹತ್ಯೆ
ಗುಜರಾತ್ ಸಚಿವೆ ಮಾಯಾ ಸಿಟ್ ಎದುರು ಶರಣು