ಪಿಎಂಕೆ ಜೊತೆಗಿನ ಮೈತ್ರಿಯನ್ನು ಅಧಿಕೃತಗೊಳಿಸಿರುವ ಎಐಎಡಿಎಂಕೆ, ಮುಂಬರುವ ಲೋಕಸಭೆ ಚುನಾವಣೆಗಳಿಗೆ ತಮಿಳುನಾಡಿನಲ್ಲಿ ತನ್ನ ಹೊಸ ಮಿತ್ರನಿಗೆ 7 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಶನಿವಾರ ಪೊಯೆಸ್ ಗಾರ್ಡನ್‌ನಲ್ಲಿ ಈ ಕುರಿತು ಪಿಎಂಕೆ ಸಂಸ್ಥಾಪಕ ಎಸ್.ರಾಮದಾಸ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ಎಐಎಡಿಎಂಕೆ ನಾಯಕಿ ಜಯಲಲಿತಾ, 2010ರಲ್ಲಿ ನಡೆಯುವ ರಾಜ್ಯಸಭೆ ಚುನಾವಣೆಗಳಲ್ಲಿಯೂ, ಯುಪಿಎಯಿಂದ ಹೊರಬಂದಿರುವ ಮಿತ್ರ ಪಿಎಂಕೆಗೆ ಒಂದು ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆ ಮಿತ್ರಕೂಟದಿಂದ ಮತ್ತು ಯುಪಿಎಯಿಂದ ಗುರುವಾರ ಹೊರಬಿದ್ದ ಪಿಎಂಕೆಯ ಕೇಂದ್ರ ಸಚಿವರಾದ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ಆರ್.ವೇಲು, ಶನಿವಾರ ತಮ್ಮ ರಾಜೀನಾಮೆ ಪತ್ರಗಳನ್ನು ಪ್ರಧಾನಿಗೆ ಸಲ್ಲಿಸಲಿದ್ದಾರೆ.
ಸ್ಥಾನ ಹಂಚಿಕೆ ಘೋಷಣೆ ಮಾಡುವ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಯಲಲಿತಾ, ಇದು "ಅಜೇಯ ಮೈತ್ರಿಕೂಟ" ಎಂದು ಘೋಷಿಸಿದರೆ, ತಮ್ಮ ಮೈತ್ರಿಕೂಟವು ತಮಿಳುನಾಡಿನ ಎಲ್ಲ 40 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದು ರಾಮದಾಸ್ ಆತ್ಮವಿಶ್ವಾಸದಿಂದ ನುಡಿದರು.
ಎಡಪಕ್ಷಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಸ್ಥಾನ ಹೊಂದಾಣಿಕೆ ಪೂರ್ಣಗೊಳ್ಳಲಿದೆ ಎಂದು ಜಯಾ ತಿಳಿಸಿದರು.
ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಒಟ್ಟು 40 ಕ್ಷೇತ್ರಗಳಿದ್ದು, 2004ರಲ್ಲಿ ಎಲ್ಲ ಸ್ಥಾನಗಳೂ ಯುಪಿಎ ಪಾಲಾಗಿದ್ದವು. ಇದರ ಫಲವಾಗಿ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬರುವಲ್ಲಿ ಡಿಎಂಕೆ ಮಿತ್ರಕೂಟವು ಪ್ರಮುಖ ಪಾತ್ರ ವಹಿಸಿದ್ದವು. |