ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ.ಅಡ್ವಾಣಿ ಜತೆಗೆ ಟಿವಿ ಕಾರ್ಯಕ್ರಮದಲ್ಲಿ ಚರ್ಚೆಯಲ್ಲಿ ಭಾಗವಹಿಸಲು ನಿರಾಕರಿಸಿರುವುದನ್ನು ಬಿಜೆಪಿ ಟೀಕಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ವಿ.ಕೆ.ಮಲ್ಹೋತ್ರ, ಮನಮೋಹನ್‌ಸಿಂಗ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲೂ ತಯಾರಿಲ್ಲ, ಟಿವಿ ಕಾರ್ಯಕ್ರಮದಲ್ಲಿ ಅಡ್ವಾಣಿ ಅವರ ಜತೆಗೆ ಚರ್ಚೆಯಲ್ಲಿ ಬಾಗವಹಿಸಲೂ ತಯಾರಿಲ್ಲ. ಅವರಿಗೆ ಆರೋಗ್ಯ ಸಮಸ್ಯೆ ಎಂಬುದು ಕೇವಲ ಒಂದು ನೆಪವಾಗಿ ಪರಿಣಮಿಸಿದೆ ಅಷ್ಟೆ. ಹೀಗಾದರೆ ಅವರು ಇಡೀ ದೇಶವೊಂದಕ್ಕೆ ಪ್ರಧಾನಮಂತ್ರಿ ಹೇಗಾಗುತ್ತಾರೆ ಎಂದು ಮಾತಿನಲ್ಲೇ ತಿವಿದಿದ್ದಾರೆ.
ಮನಮೋಹನಸಿಂಗ್ ಅವರು ಕೇವಲ ಒಂದು ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹಾಗೂ ಅವರು ಸೋತಿದ್ದರು ಕೂಡಾ ಎಂದು ಮಲ್ಹೋತ್ರಾ ಹೇಳಿದರು.
ನಿನ್ನೆ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ.ಅಡ್ವಾಣಿ ಟಿವಿ ನೇರಪ್ರಸಾರದ ಕಾರ್ಯಕ್ರಮದಲ್ಲಿ ವಾಗ್ವಾದಕ್ಕೆ ಮನಮೋಹನಸಿಂಗ್‌ರನ್ನು ಸವಾಲಿನ ಆಹ್ವಾನ ನೀಡಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ವಕ್ತಾರರಾದ ಜಯಂತಿ ನಟರಾಜನ್, ಬಿಜೆಪಿ ಅಮೆರಿಕದಲ್ಲಿ ಮಾಡಿದಂತಹುದನ್ನೇ ಮಾಡಲು ಹೊರಟಿದೆ ಎಂದು ಅಣಕಿಸಿದ್ದರು. ಜತೆಗೆ, ಈ ಆಹ್ವಾನಕ್ಕೆ ಪ್ರತಿಕ್ರಿಯಿಸುವುದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬಿಟ್ಟಿದ್ದು ಎಂದಿದ್ದರು. |