ಲೋಕಸಭಾ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಪಕ್ಷ ಸಿದ್ದವಾಗುತ್ತಿರುವಂತೆಯೇ ಮಾಜಿ 1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ನಡೆದ ನಂತರ ನಡೆದ ಸಿಖ್ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ ಜಗದೀಶ್ ಟೈಟ್ಲರ್‌ಗೆ ಸಿಬಿಐ ಶನಿವಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ಕ್ಲೀನ್ ಚಿಟ್ ನೀಡಿರುವ ಸಾಧ್ಯತೆಗಳಿರುವುದಾಗಿ ಮೂಲಗಳು ತಿಳಿಸಿವೆ.
ಇದಕ್ಕೆ ಸಂಬಂಧಿಸಿದಂತೆ ಕರ್ಕರ್‌ದೂಮಾ ಕೋರ್ಟ್‌ನಲ್ಲಿ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ರಾಮ್ ಲಾಲ್ ಮೀನಾರಿಗೆ ಸಲ್ಲಿಸಿದ ವರದಿಯಲ್ಲಿ ಟೈಟ್ಲರ್ ಆರೋಪಿ ಎಂಬುದನ್ನು ಸಾಬೀತು ಪಡಿಸಲು ತಕ್ಕ ಸಾಕ್ಷ್ಯಗಳು ಇಲ್ಲ ಎಂದು ಸಿಬಿಐ ಹೇಳಿದೆ. ಆದಾಗ್ಯೂ ಈ ವರದಿಯನ್ನು ಏಪ್ರಿಲ್ 2ರಂದು ಪರಿಶೀಲಿಸಲಾಗುವುದು ಎಂದು ಕೋರ್ಟ್ ಹೇಳಿದೆ.
ಏತನ್ಮಧ್ಯೆ ಎಲ್ಲಾ ತನಿಖೆಗಳನ್ನು ಪೂರೈಸಿದ ನಂತರವೇ ವರದಿಯನ್ನು ಸಲ್ಲಿಸಲಾಗಿದೆ ಎಂದು ತನಿಖಾದಳವು ವಿಚಾರಣೆ ವೇಳೆ ಹೇಳಿಕೆ ನೀಡಿದೆ. ಟೈಟ್ಲರ್ ಈ ಗಲಭೆಯಲ್ಲಿ ಭಾಗಿಯಾಗಿದ್ದಾರೆಂದು ದೂರಿರುವ ಕ್ಯಾಲಿಫೋರ್ನಿಯಾ ಮೂಲದ ಸಾಕ್ಷಿದಾರ ಜಸ್ಬೀರ್ ಸಿಂಗ್ ಆನಂತರ ಈ ಪ್ರಕರಣದ ಪ್ರಕ್ರಿಯೆಗಳಿಂದ ಹಿಂದೆ ಸರಿದಿದ್ದರು.
ಈ ನಡುವೆ ಸಿಖ್ ವಿರೋಧಿ ಹಿಂಸಾಚಾರಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ನಾನಾವತಿ ಕಮಿಷನ್‌ಗೆ ಈ ಮೊದಲು ಜಸ್ಬೀರ್ ಸಿಂಗ್ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ 1984ರ ನವೆಂಬರ್ 3ರಂದು ಟೈಟ್ಲರ್ ತಮ್ಮ ಕ್ಷೇತ್ರದಲ್ಲಿ ಸಿಖ್‌ರನ್ನು ಹತ್ಯೆಗೈಯಲು ಪ್ರೇರೇಪಿಸಿರುವುದರ ಬಗ್ಗೆ ತಾನು ಕೇಳಿದ್ದೇನೆ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಈ ಬಗ್ಗೆ ಜಸ್ಬೀರ್ ಸಿಂಗ್ ಅವರನ್ನು ವಿಚಾರಣೆಗೊಳಪಡಿಸಿದ ನಂತರವೇ ಇದೀಗ ಸಲ್ಲಿಸಲಾದ ವರದಿಯನ್ನು ಸಿದ್ದಪಡಿಸಲಾಗಿದೆ ಎಂದು ಸಿಬಿಐ ಹೇಳಿದೆ. |