ಕೇಂದ್ರ ಸಾರ್ವಜನಿಕ ವಲಯದ ಅಧಿಕಾರಿಗಳ ವೇತನ ಪರಿಷ್ಕರಣೆಗೆ ಸರ್ಕಾರವು ನಿರ್ಧರಿಸಿದ್ದು, ಇದರಿಂದಾಗಿ ಸುಮಾರು ನಾಲ್ಕು ಲಕ್ಷ ಅಧಿಕಾರಿಗಳು ಅನುಕೂಲ ಪಡೆಯಲಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮಂಡಳಿ ಮಟ್ಟದ ಹಾಗೂ ಅವರ ಕೆಳಗಿನ ಹಂತದ ಅಧಿಕಾರಿಗಳು ಹಾಗೂ ಸೂಪರ್‌ವೈಸರಿ ಸಿಬ್ಬಂದಿಗಳ ವೇತನದಲ್ಲಿ ಹೆಚ್ಚಳವಾಗಲಿದೆ.
ವೇತನ ಹೆಚ್ಚಳ ಪ್ಯಾಕೇಜಿನಲ್ಲಿ ಮನೆಬಾಡಿಗೆ ಭತ್ಯೆ ಹಾಗೂ ನಿವೃತ್ತಿ ಭತ್ಯೆಗಳೂ ಸೇರಿವೆ. ಗೃಹ ಸಚಿವ ಪಿ. ಚಿದಂಬರಂ ನೇತೃತ್ವದ ಸಚಿವರ ಸಮಿತಿಯ ಶಿಫಾರಸ್ಸಿನ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ನವೆಂಬರ್‌ನಲ್ಲಿ ಸರ್ಕಾರವು ವೇತನ ಹಾಗೂ ಭತ್ಯೆಗಳ ಪರಿಷ್ಕರಣೆಯ ಅಧಿಸೂಚನೆ ನೀಡಿತ್ತು.
ಸಾರ್ವಜನಿಕ ವಲಯದ ಅಧಿಕಾರಿಗಳು, ಅದರಲ್ಲೂ ವಿಶೇಷವಾಗಿ ತೈಲ ವಲಯದ ಅಧಿಕಾರಿಗಳು ಜನವರಿಯಲ್ಲಿ ಮುಷ್ಕರ ಕೈಗೊಂಡಾಗ ಪರಿಷ್ಕೃತ ವೇತನಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದ್ದರು.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವೇತನ ಪರಿಷ್ಕರಣೆಯ ಸ್ವರೂಪವು ಕಂಪೆನಿಯಿ0ದ ಕಂಪೆನಿಗೆ ಭಿನ್ನವಾಗಿದೆ ಎಂದು ಹೇಳಿದ್ದಾರೆ. |