ಮುಂಬೈದಾಳಿಕೋರ ಅಜ್ಮಲ್ ಅಮೀರ್ ಕಸಬ್‌ನನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಲು ಇಲ್ಲಿನ ವಿಶೇಷ ನ್ಯಾಯಾಲಯ ನೇಮಿಸಿದ್ದ ವಕೀಲೆ ಅಂಜಲಿ ವಾಘಮಾರೆ ಅವರು ತನ್ನ ಪ್ರಾತಿನಿಧ್ಯವನ್ನು ಶಂಕಿತ ರಾಜಕೀಯ ಸಂಘಟನೆಯೊಂದರ ಒತ್ತಡದ ಬಳಿಕ ಹಿಂಪಡೆದಿದ್ದಾರೆ. ಸಾರ್ವಜನಿಕರ ಭಾವನೆಗಳ ಹಿನ್ನೆಲೆಯಲ್ಲಿ ತಾನು ಕಸಬ್ ಪ್ರಕರಣದಿಂದ ಹಿಂಸರಿಯುವುದಾಗಿ ಅವರು ಹೇಳಿದ್ದಾರೆ.ವಾರ್ಲಿ ಕ್ಯಾಂಪ್ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ತೆರಳಿರುವ ಸುಮಾರು 100ಕ್ಕೂ ಅಧಿಕ ಕಾರ್ಯಕರ್ತರು ವಾಘಮಾರೆ ಅವರ ಮನೆಗೆ ಕಲ್ಲೆಸೆದು ಪ್ರತಿಭಟನೆ ನಡೆಸಿದ್ದರು. ಘಟನೆಯಲ್ಲಿ ಅಂಜಲಿಯವರಿಗೆ ಹಾನಿಯಾಗದಿದ್ದರೂ, ಗುಂಪು ಚದುರಿಸಲು ಪೊಲೀಸರು ಲಘುಲಾಠಿಚಾರ್ಜ್ ನಡೆಸಿದರು. ಬಳಿಕ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ." ಕಸಬ್‌ನನ್ನು ನ್ಯಾಯಾಲಯದಲ್ಲಿ ಅಂಜಲಿ ಪ್ರತಿನಿಧಿಸಲು ಒಪ್ಪಿರುವ ಕ್ರಮದಿಂದ ಪ್ರತಿಭಟನಾಕಾರರು ಅಸಮಾಧಾನಿತರಾಗಿದ್ದರೆಂದು ತೋರುತ್ತದೆ. ಅವರು ಅಂಜಲಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು ಎಂಬುದಾಗಿ ಜಂಟಿ ಪೊಲೀಸ್ ಆಯುಕ್ತ ಕೆ.ಎಲ್ ಪ್ರಸಾದ್ ಹೇಳಿದ್ದಾರೆ.ಪ್ರತಿಭಟನಾಕಾರರು ಒಂದೋ ಶಿವಸೇನೆಯವರು ಇಲ್ಲವೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯವರು ಆಗಿರಬೇಕು ಎಂಬುದಾಗಿ ಪ್ರಸಾದ್ ತಿಳಿಸಿದರು.ಕಸಬ್ ತನಗೆ ವಕೀಲರು ಬೇಕೆಂದು ನ್ಯಾಯಲಯವನ್ನು ವಿನಂತಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಕಾನೂನು ಸೇವೆ ಪ್ರಾಧಿಕಾರದ ಅಂಜಲಿ ಅವರನ್ನು ನ್ಯಾಯಾಲಯ ನೇಮಕ ಮಾಡಿತ್ತು. |