ವರುಣ್ ಗಾಂಧಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಿರುವುದು 'ಸರಿಯಲ್ಲ' ಎಂದು ಹೇಳಿರುವ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್, ಇಂತಹ ಕಠಿಣ ಕಾಯ್ದೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಲಾಗಿದೆ ಎಂದು ಆರೋಪಿಸಿದರು.
"ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ವರುಣ್ ವಿರುದ್ಧ ಆರೋಪ ಹೊರಿಸಲಾಗಿರುವುದು ಸಂಪೂರ್ಣ ತಪ್ಪು. ಈ ಕಾಯ್ದೆಯನ್ನು ಯಾವಾಗಲೂ ರಾಜಕೀಯ ಉದ್ದೇಶಗಳಿಗಾಗಿಯೇ ಬಳಸಲಾಗುತ್ತಿದೆ. ರಸ್ತೆ ಪ್ರದರ್ಶನಕ್ಕೆ ಮುನ್ನ ವರುಣ್ ಮತ್ತು ಅವರ ಬೆಂಬಲಿಗರನ್ನು ಬಂಧಿಸಲು ಪೊಲೀಸರು ಯಾಕೆ ವಿಫಲರಾಗಿದ್ದಾರೆ" ಎಂದು ಅವರು ಪ್ರಶ್ನಿಸಿದ್ದಾರೆ. ಅವರು ಇಲ್ಲಿ ನಡೆದ ಸಮಾರಂಭ ಒಂದರ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
"ವರುಣ್ ಗಾಂಧಿ ವಿರುದ್ಧ ಈ ಕಾಯ್ದೆಯನ್ನು ಹೇರಿರುವುದು ಬಿಜೆಪಿ ಮತ್ತು ಬಹುಜನ ಸಮಾಜವಾದಿ ಪಕ್ಷದ ತಂತ್ರವಾಗಿದೆ. ವರುಣ್ ಗಾಂಧಿ ವಿರುದ್ಧ ಅನುಕಂಪ ಹುಟ್ಟಿಸಲು ಹೂಡಿರುವ ಉಪಾಯವಿದಾಗಿದೆ" ಎಂದು ಅವರು ನುಡಿದರು. ಒಂದೊಮ್ಮೆ ಬಿಜೆಪಿ-ಬಿಎಸ್ಪಿ ನಡುವೆ ಯಾವುದೇ ತಿಳುವಳಿಕೆ ಇಲ್ಲದಿದ್ದರೆ, ವರುಣ್ ಅವರನ್ನು ರಸ್ತೆ ಪ್ರದರ್ಶನಕ್ಕೆ ಮುಂಚಿತವಾಗಿ ಯಾಕೆ ಬಂಧಿಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
"ಪಿಡಬ್ಲ್ಯುಡಿ ಎಂಜಿನಿಯರ್ ಔರಯ್ಯ ಕೊಲೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತ ಕಮಲೇಶ್ ಪಾಠಕ್ ವಿರುದ್ಧ ಎನ್ಎಸ್ಎ ಹೇರಲಾಯಿತು. ಆದರೆ, ಪ್ರಕರಣದ ನಿಜವಾದ ಆರೋಪಿಯನ್ನು ಮುಕ್ತವಾಗಿ ಬಿಡಲಾಗಿದೆ. ಈ ಕಾರಣಕ್ಕಾಗಿ ಈ ಕಾಯ್ದೆ ಜಾರಿಯನ್ನು ತಾನು ವಿರೋಧಿಸುತ್ತಿದ್ದೇನೆ" ಎಂದು ಅವರು ನುಡಿದರು. |