ರಾಜಕೀಯದ ಅಪರಾಧೀಕರಣವನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಬಾಲಿವುಡ್ ತಾರೆ ಸಂಜಯ್ ದತ್ ಅವರು ಚುನಾವಣಾ ಸ್ಫರ್ಧೆಗೆ ಅವಕಾಶ ಕೋರಿ ತನ್ನ ವಿರುದ್ಧದ ಶಿಕ್ಷೆಯನ್ನು ಅಮಾನತ್ತುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಮನವಿಯನ್ನು ತಿರಸ್ಕರಿಸಿದ್ದು, ಸಂಜಯ್ ದತ್‌ರ ಚುನಾವಣಾ ಸ್ಫರ್ಧೆಯ ಮಹದಾಸೆಗೆ ತಣ್ಣೀರೆರಚಿದಂತಾಗಿದೆ.
ಸಂಜಯ್ ದತ್ 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿದ್ದು ಅವರು ನ್ಯಾಯಾಲಯದ ಶಿಕ್ಷೆ ಎದುರಿಸುತ್ತಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಅಪರಾಧಕ್ಕಾಗಿ ಅವರಿಗೆ ಶಿಕ್ಷೆ ವಿಧಿಸಲಾಗಿದೆ.
ಸುಪ್ರೀಂ ಕೋರ್ಟಿನ ಈ ತೀರ್ಪು, ಸಂಜಯ್ ಅವರಷ್ಟೆ ಉತ್ಸಾಹದಿಂದಿದ್ದ ಸಮಾಜವಾದಿ ಪಕ್ಷಕ್ಕೂ ಭಾರೀ ಆಘಾತ ನೀಡಿದೆ. ಸಮಾಜವಾದಿ ಪಕ್ಷವು ದತ್‌ರನ್ನು ಪ್ರತಿಷ್ಠಿತ ಲಕ್ನೋ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ತುದಿಗಾಲಿನಲ್ಲಿ ನಿಂತಿದ್ದು, ಇದೀಗಾಗಲೇ ರಸ್ತೆ ಪ್ರದರ್ಶನಗಳನ್ನೂ ಮಾಡಿತ್ತು.
ಸುಪ್ರೀಂ ಕೋರ್ಟ್ ದತ್ ಅರ್ಜಿ ಕುರಿತ ಅರ್ಜಿಯ ತೀರ್ಪನ್ನು ಸೋಮವಾರ ಕಾಯ್ದಿರಿಸಿತ್ತು. ದತ್ ಅವರ ಈ ಮನವಿಯ ವಿಚಾರಣೆ ವೇಳೆಗೆ ಸಿಬಿಐ ಬಲವಾದ ವಿರೋಧ ವ್ಯಕ್ತಪಡಿಸಿತ್ತು.
"ಇದು ನನ್ನ ಮೊದಲ ಅಪರಾಧ ಮತ್ತು ಉತ್ತಮ ಕೌಟುಂಬಿಕ ಹಿನ್ನೆಲೆ ಹೊಂದಿರುವ ವ್ಯಕ್ತಿ ನಾನು" ಎಂದು ಹೇಳಿಕೊಂಡಿದ್ದ ದತ್, ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು ತಾನು ಚುನಾವಣೆಯಲ್ಲಿ ಸ್ಫರ್ಧಿಸುವುದಾಗಿ ಮನವಿಯಲ್ಲಿ ಹೇಳಿಕೊಂಡಿದ್ದರು. |